ಭಾನುವಾರ, ಜೂನ್ 7, 2015

ಅ ಫಾರ್ ಅಯ್ಯೋ, ಪ ಫಾರ್ ಪಾಪ

ಸಿಂಗಪುರಕ್ಕೆ ಬಂದ ಹೊಸದರಲ್ಲಿ ಇಲ್ಲಿನ ಕನ್ನಡ ಸಂಘದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. 'ಕನ್ನಡ ಕಲಿ' ಕಾರ್ಯಕ್ರಮದ ಅಂಗವಾಗಿ ಹೊಸದಾಗಿ ಕನ್ನಡ ಓದಲು ಬರೆಯಲು ಕಲಿತಿದ್ದ ಮಕ್ಕಳೆಲ್ಲ ವೇದಿಕೆ ಹತ್ತಿ ಸಂಭ್ರಮಿಸುತ್ತಿದ್ದರು. 'ಒಂದು ಎರಡು, ಬಾಳೆಲೆ ಹರಡು'- ಹಿರಿ ಕಿರಿಯ ಕಂಠಗಳಲ್ಲಿ ಧ್ವನಿ ಹೊರಡುತ್ತಿದ್ದಂತೆ ತಂತಾನೇ ನನ್ನ ಕಣ್ಣುಗಳಲ್ಲಿ ನಗು ಇಣುಕಿತು. ಮನಸ್ಸು ನನ್ನ ಕುಮಾರ ಕಂಠೀರವನಿಗೆ ಕನ್ನಡ ಕಲಿಸಲು ಮುಂದಾದ ಸಮಯದ ಮಜಕೂರುಗಳನ್ನು ಮೆಲುಕಾಡತೊಡಗಿತು.
ನಮ್ಮ ಹಿರಿಯರು 'ಮನೆಯೆ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು' ಎಂದು ಸುಲಭಕ್ಕೆ ಹೇಳಿ ಬಿಟ್ಟರು. ಈ ಗಾದೆ ರೂಪುಗೊಂಡ ಸಮಯದಲ್ಲಿ ಸಂಸ್ಕಾರ, ಸಂಸ್ಕೃತಿ, ಜೀವನ ವಿಧಾನ, ಹೆಚ್ಚೆಂದರೆ ಒಂದು ಭಾಷೆ... ಇಷ್ಟನ್ನೇ ಮಕ್ಕಳು ಕಲಿಯುತ್ತಿದ್ದುದು, ಅಮ್ಮಂದಿರು ಕಲಿಸುತ್ತಿದ್ದುದು. ಮೇಲಾಗಿ ಕಲಿಸುವವರು ಅಕ್ಕರೆಯ ಅಮ್ಮನಾಗಿರಲಿ, ಹಿರಿಯ ಬಂಧುವಾಗಿರಲಿ ಇಲ್ಲವೇ ಹೆದರಿಸುವ ಮಾಸ್ತರಾಗಿರಲಿ... ಅವರು ಹೇಳಿಕೊಟ್ಟಿದ್ದನ್ನು ಸಂಪೂರ್ಣ ಒಪ್ಪಿ, ಅನೂಚಾನವಾಗಿ ತಿದ್ದಿ-ತೀಡಿ ಕರಗತ ಮಾಡಿಕೊಳ್ಳುವುದು ಕಲಿಯುವವರ ಧರ್ಮವಾಗಿತ್ತು. 'ಕನ್ನಡದಲ್ಲಿ ಅಃ/ಅನುನಾಸಿಕಗಳು ಏಕಿವೆ, ಒಂದೇ ಉಚ್ಚಾರಕ್ಕೆ ಶ-ಷ ಎರಡು ಅಕ್ಷರ ಏಕೆ' ಎಂದೆಲ್ಲ ಆಗಿನ 'ಸಾಮಾನ್ಯ' ವಿದ್ಯಾರ್ಥಿಗಳು ಪ್ರಶ್ನಿಸಿದ್ದು ಕಡಿಮೆಯೇ, ಒಂದೊಮ್ಮೆ ಕೇಳಿದ್ದರೂ ಬರುತ್ತಿದ್ದ ಉತ್ತರ ಹೆಚ್ಚುಕಡಿಮೆ ಒಂದೇ-'ಸಾಕು ತಲೆಹರಟೆ!'
ವರುಷಗಳ ಹಿಂದೆ ಒಂದು ಪಾಟಿಯಲ್ಲಿ 'ಅಆಇಈ' ಬರೆದು, 'ಇದನ್ನು ತಿದ್ದು ಮಗಳೇ' ಎಂದು ಕೈಗಿತ್ತ ಹೊತ್ತಿನಲ್ಲಿ ನನ್ನಮ್ಮನಿನೂ ಇಂಥ ವಿಚಾರ ಹೊಳೆದಿರಲಿಕ್ಕಿಲ್ಲ. ನಾನೂ ಅಷ್ಟೇ, ಉಲ್ಟಾ ಮಾತಾಡದೇ ಅಮ್ಮ ಬರೆದಿದ್ದನ್ನು ತಿದ್ದುತ್ತಾ ಹೋಗಿದ್ದೆ. ಕಾಲವೂ ಬಹಳ ಸರಳವಾಗಿತ್ತು. ನನ್ನಂಥ ಬಹುಪಾಲು ಮಕ್ಕಳಿಗೆ ಐದನೆತ್ತಿಯವರೆಗೆ ಒಂದೇ ಭಾಷೆ-ಕನ್ನಡ. ಆಮೇಲೆ ಇಂಗ್ಲೀಷ್, ಹಿಂದಿ ಎಲ್ಲ ಬಂದಿದ್ದು. ಮಾಸ್ತರು 'ಸಿಯುಟಿ-ಕಟ್, ಪಿಯುಟಿ-ಪುಟ್' ಎಂದು ಹೇಳಿ ಕೊಟ್ಟರು, ನಾವೂ ಪೀಂ ಪಿಟ್ ಎನ್ನದೇ ತೌಡು ಕುಟ್ಟುತ್ತಾ ಹೋಗಿದ್ದೆವು. ಆಗೆಲ್ಲ ಏನಿದ್ದರೂ ಸ್ಪೆಲ್ಲಿಂಗ್, ಅರ್ಥ ಇವೆರಡಕ್ಕೆ ಮಾತ್ರ ಲಕ್ಷ್ಯ. ಫೋನಿಕ್ಸ್, ವ್ಯುತ್ಪತ್ತಿ ಇಂಥವೆಲ್ಲ ನಮ್ಮ ಬ್ರಹ್ಮಾಂಡದಲ್ಲಿ ಅಸ್ತಿತ್ವದಲ್ಲೇ ಇರಲಿಲ್ಲ.
'ಒಂದು ಮಗು ಹುಟ್ಟಿದಾಗ ಒಬ್ಬ ತಾಯಿಯೂ ಜನ್ಮ ತಾಳುತ್ತಾಳೆ' ಎಂಬ ಮಾತಿದೆ, ಹಾಗೇ ಒಂದು ಮಗುವಿನಲ್ಲೊಬ್ಬ 'ವಿದ್ಯಾರ್ಥಿ' ಹುಟ್ಟಿಕೊಳ್ಳುತ್ತಿದ್ದಂತೆ ಅಮ್ಮನಲ್ಲೂ ಒಬ್ಬ 'ಗುರು'ವಿನ ಸೃಷ್ಟಿಯಾಗುತ್ತದೆ. ನಾನು ಅಮ್ಮನಾದ ಮೇಲೆ, ನನ್ನ ಮಗನಿಗೆ ಬರೆಯುವುದನ್ನು ಕಲಿಸುವ ಸಂದರ್ಭ ಬಂದಾಗಲೇ ಈ ಗುರು ಪದವಿಯ ಗುರುತರ ಜವಾಬ್ದಾರಿ ಮತ್ತು ಅರಿವಾಗಿದ್ದು.
ಅವನ ತಲೆಮಾರಿನ ಬಹುತೇಕರಂತೆ ಅವನೂ ಮೊದಲು ಇಂಗ್ಲೀಷ್ ಓದಲು, ಬರೆಯಲು ಕಲಿತ. ಮೂರನೇ ವರ್ಷದವರೆಗೆ ಅಚ್ಚ ಕನ್ನಡ ಮಾತ್ರ ಅರಿತಿದ್ದ ಆತ ಶಾಲೆಯಲ್ಲಿ ಆಂಗ್ಲ ಭಾಷೆಗೆ ತೆರೆದುಕೊಳ್ಳುತ್ತಿದ್ದಂತೆಯೇ ಮನದ ಮೂಲೆಗಳಲ್ಲಿ ಕನ್ನಡ ನಿಧಾನಕ್ಕೆ ಮಸುಕಾಗತೊಡಗಿತು. ಆ ಸಮಯದಲ್ಲಿ ನಾವು ಯುಎಸ್ಎಯಲ್ಲಿ ಇದ್ದುದರಿಂದ ಆತ ಇಂಗ್ಲೀಷ್ ಕಲಿಯಬೇಕಾದ ಒತ್ತಡ ಇತ್ತು. ಹಾಗಾಗಿ ಕನ್ನಡದ ಗೂಡಲ್ಲಿ ಆಂಗ್ಲ ಕೋಗಿಲೆ ಇಟ್ಟ ಮೊಟ್ಟೆಗಳಿಗೆ ನಾವೂ ಅನಿವಾರ್ಯವಾಗಿ ಕಾವು ಕೊಟ್ಟೆವು. ಆತ ಆ ಭಾಷೆಗೆ ಒಗ್ಗಿಕೊಂಡು, ಸರಾಗವಾಗಿ ಓದಲು, ಬರೆಯಲು ಕಲಿತ ಮೇಲೆ, ಮತ್ತೆ ಕನ್ನಡದ ಬಳಕೆಯ ಮೇಲೆ ಜಮೆಗೊಂಡಿದ್ದ ದೂಳು ಒರೆಸುವ ಕೆಲಸ ಶುರುವಾಯಿತು. ಕರ್ನಾಟಕದಲ್ಲಿ ಕನ್ನಡ ಪರಿಸರದ ನಡುವೆ ಇದ್ದು ಆ ಭಾಷೆಯನ್ನು ಕಲಿಸುವಷ್ಟು ಸುಲಭವಲ್ಲ, ದೂರ ದೇಶದಲ್ಲಿ ಕನ್ನಡದ ಗಂಧ ಗಾಳಿ ಇಲ್ಲದೆಡೆ ಕಲಿಸುವುದು. ಸಿಂಗಪುರದ ಕನ್ನಡಿಗ ಮಕ್ಕಳು ಜೊತೆಗಾರರ ಉಮೇದಿಗಾದರೂ ಕಲಿತರೇನೋ, ನನ್ನ ಮಗನಿಗೆ ಸಹಕನ್ನಡಿಗ ಸ್ನೇಹಿತರೂ ಇರಲಿಲ್ಲ.
ಒಂದಿನ ಕನ್ನಡ ಅಕ್ಷರಗಳನ್ನು ಹೇಳಿ ಅದರಿಂದ ಆರಂಭವಾಗುವ ಶಬ್ದಗಳನ್ನು ಹೇಳಿಸುತ್ತಿದ್ದೆ. ಅ-ಅರಸ, ಆ-ಆನೆ ಎಂಬ ನಮ್ಮ ಡಿಫಾಲ್ಟ್ ಪದ ವಿಸ್ತಾರ ಅವನಿಗೆ ಪರಿಚಯವಿರಲಿಲ್ಲ. ಹಾಗಾಗಿ ಸುಲಭ ಶಭ್ದಗಳಲ್ಲಿ 'ಅ-ಅನ್ನ, ಆ-ಆ ಕಡೆ, ಇ-ಇದು, ಈ-ಈ ಕಡೆ...' ಹೀಗೆ ನಮ್ಮ ಅಭ್ಯಾಸ ಶುರುವಾಯಿತು. 'ಐ'ಗೆ ಒಂದು ಶಬ್ದ ಹೇಳು ಅಂದೆ- 'ಐಯ್ಯೋ' ಎಂದ. ಫೋನಿಕ್ಸ್ ವಿಧಾನದಲ್ಲಿ ಆಂಗ್ಲ ಭಾಷೆಯನ್ನು ಕಲಿತಿದ್ದ ಮಗ, ಅದೇ ನಿಯಮಗಳನ್ನು ಕನ್ನಡಕ್ಕೂ ಅನ್ವಯಿಸಿ 'ಅಯ್ಯೋ'ಗೆ ಐಯ್ಯೋ ಎಂದಿದ್ದು ನೋಡಿ ನಗು ತಡೆಯಲಾಗಲಿಲ್ಲ. ಅವನಿಗೋ, ಗೊಂದಲ! ಇಷ್ಟು ಸರಳ ಉದಾಹರಣೆಗೆ ಅಮ್ಮ ನಗುತ್ತಿದ್ದಾಳಲ್ಲ ಎಂದು. ಆ ಹೊತ್ತಿಗೆ ಕನ್ನಡ ಬರೆಯಲು ಗೊತ್ತಿಲ್ಲದಿದ್ದ ಅವನಿಗೆ ತಿಳಿಸಿ ಹೇಳುವಷ್ಟರಲ್ಲಿ ನನ್ನ ಸ್ಥಿತಿ 'ಅಯ್ಯೋ' ಎನ್ನುವಂತಾಗಿತ್ತು.
ಅಂತೂ ಹಳಿ ತಪ್ಪಿ, ಅಯೋಮಯವಾಗಿದ್ದ 'ಅಯ್ಯೋ'ವನ್ನು ಸ್ವಸ್ಥಾನಕ್ಕೆ ತಂದಿಳಿಸಿ ನಮ್ಮ ಪದಬಂಡಿ ಮುಂದುವರಿಯಿತು. ಒ-ಒಂದು, ಓ-ಓಡೋದು... ಔ- 'ಅವ್ ಹೋಗ್ತ'....!! ಮತ್ತದೇ ಫೋನಿಕ್ಸ್ ತಮಾಷೆ. ನಮ್ಮ ಮನೆ ಮಾತು 'ಹವ್ಯಕ ಕನ್ನಡ'ದಲ್ಲಿ 'ಅವು' ಎಂದರೆ 'ಅವರು' ಎಂದರ್ಥ. ಮಗನಿಗೆ ಗೊತ್ತಿದ್ದಿದ್ದು ಅದೊಂದೇ ಕನ್ನಡವಾದ್ದರಿಂದ ಅವನ ಪ್ರಕಾರ ಈ ಪದ ವಿಸ್ತಾರವೂ ಕಾಯಿದೆಶೀರು ಇತ್ತು. ವಿಧಿ ಇಲ್ಲದೇ ನಾನೇ ಔ-ಅವು, ಅಂ-ಅಮ್ಮ...ಗಳನ್ನೆಲ್ಲ 'ಅಕ್ರಮ-ಸಕ್ರಮ' ಮಾಡಿಕೊಂಡೆ.
ವರ್ಣಮಾಲೆಯನ್ನು ಕಲಿತು ಮುಗಿಸುವ ಹೊತ್ತಿಗೆ 'ಒತ್ತಕ್ಷರ'ದ ತಲೆ ಬಿಸಿ ಶುರುವಾಯ್ತು. ಇಂಗ್ಲೀಷಿನಂತೆ ಇನ್ನೊಂದ್ಸಲ ಅದೇ ಅಕ್ಷರವನ್ನು ಬರೆದರೆ ಆಯ್ತಪ್ಪ, ಒಂಚೂರೂ ಹೋಲಿಕೆ ಇಲ್ಲದ ಹೊಸದೊಂದು ಒತ್ತು ಬಂದು ಗತ್ತು ಮಾಡುವುದೇಕೆ ಎಂದವನ ಪ್ರಶ್ನೆ. ಯಥಾ ಪ್ರಕಾರ 'ಅಮ್ಮ' ಎಂದರೆ 'ಅ-ಮ-ಮ-ಅ' ಎಂದೂ, 'ಅಪ್ಪ' ಎಂದರೆ 'ಅ-ಪ-ಪ-ಅ' ಎಂದೆಲ್ಲ ಬರೆದು, ಅಳಿಸಿ... ಅಂತೂ ಇಂತೂ ಒತ್ತಕ್ಷರ ಕೈಗೆ ಹತ್ತುವಷ್ಟರಲ್ಲಿ ನೆತ್ತಿ ಹೊತ್ತಿ ಉರಿದಷ್ಟು ಸುಸ್ತು!
ಇಷ್ಟೆಲ್ಲ ಕಷ್ಟಪಟ್ಟು ಕಲಿತ ಕನ್ನಡ ಭಾರತದಲ್ಲಿ ಒಂದನೆಯ ತರಗತಿ ಓದುತ್ತಿದ್ದಾಗ ಅಂತೂ ಅನುಕೂಲಕ್ಕೆ ಬಂತು. ಶಾಲಾ ಪುಸ್ತಕದ ಜೊತೆ ಬಸ್ಸಿನ ಬೋರ್ಡ್, ನಿಯತಕಾಲಿಕಗಳು ಎಲ್ಲ ಓದುವ ಮಟ್ಟಕ್ಕೆ ಅವ ಬಂದ. ಇನ್ನೇನು ಮಗ ನನ್ನ ಫೇವರಿಟ್ ಆದ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳನ್ನು ಓದುತ್ತಾನೆ, ಮಾರ-ಪ್ಯಾರ, ಕರ್ವಾಲೋ, ಜುಗಾರಿ ಕ್ರಾಸ್ ಎಂದೆಲ್ಲ ಅವನ ಜೊತೆ ಕಥೆ ಹೊಡೆಯಬಹುದು ಎಂದು ಹಗಲುಕನಸು ಕಾಣುವ ಹೊತ್ತಿಗೆ ಸಿಂಗಪುರ ಕೈ ಬೀಸಿ ಕರೆದಿತ್ತು.
ಇಲ್ಲಿ ಬರುತ್ತಿದ್ದಂತೆ ಹಿಂದಿ ಕಲಿಯಬೇಕಾದ ಅನಿವಾರ್ಯತೆ, ಅದೂ ಸೀದಾ ಎರಡನೆತ್ತಿ ಲೆವೆಲ್ಗೆ, ವ್ಯಾಕರಣದ ಜೊತೆಗೆ. ಮತ್ತೆ ನಮ್ಮ 'ಅ,ಆ,ಇ,ಈ' ಶುರು. ಈ ಬಾರಿ ಅವನಿಗೆ ಸಂಪೂರ್ಣ ಅಪರಿಚಿತವಾಗಿದ್ದ ಭಾಷೆಯಲ್ಲಿ. ಅದು ಇನ್ನೊಂದು ರಾಮಾಯಣ ಬಿಡಿ!
ಹೊರನಾಡಿನಲ್ಲಿ ಕನ್ನಡ ಕಲಿಕೆಗೆ ಇರುವ ಅಡ್ಡಿ ಅನೇಕ. ಮೇಲಿನ ತರಗತಿಗಳಿಗೆ ಬರುತ್ತಿದ್ದಂತೆ ಮಕ್ಕಳ ಆಂಗ್ಲ ಭಾಷಾ ಬಳಕೆ ಹೆಚ್ಚಾಗುತ್ತದೆ. ಶಾಲೆಯ ಪುಸ್ತಕಗಳ ಜೊತೆಗೆ ಅವರು ಓದುವ ಇತರ ಮನರಂಜನೆಯ, ಜ್ಞಾನಾರ್ಜನೆಯ ಪುಸ್ತಕಗಳೆಲ್ಲ ಆಂಗ್ಲ ಭಾಷೆಯವು. ಕನ್ನಡ ಕಣ್ಣಿಗೆ ಬೀಳುವುದೇ ಅಪರೂಪ. ಬಿದ್ದರೂ ಪಕ್ಕದಲ್ಲಿ ಅದರ ಆಂಗ್ಲ ಭಾಷಾಂತರ ರೂಪ ಲಭ್ಯ, ಬಹುತೇಕ ಸಂದರ್ಭಗಳಲ್ಲಿ. ಕನ್ನಡ ಅಕ್ಷರ ಹೆಕ್ಕಿ ಹೆಕ್ಕಿ, ಪದ ಜೋಡಿಸಿ, ವಾಕ್ಯ ಮಾಡಿ ಅರಿತುಕೊಳ್ಳುವಷ್ಟು ಆಸಕ್ತಿ, ಸಹನೆ ಎರಡೂ ಇಂದಿನ ವೇಗಗತಿಯ ಸಮಾಜದಲ್ಲಿ ಬೆಳೆಯುತ್ತಿರುವ ಮಕ್ಕಳಲ್ಲಿಲ್ಲ. ಇನ್ನು ಅವರ ಉಚ್ಚಾರಣೆಯೋ!? ಗೌರಮ್ಮನ್ನಿಗೆ ಗೌನ್ ತೊಡಿಸಿದಂತೆ. ನನ್ನ ಬಂಧುವೊಬ್ಬರ ಮಕ್ಕಳಿಬ್ಬರು ಅಮೆರಿಕದಲ್ಲಿ ಹುಟ್ಟಿ ಬೆಳೆದವರು. ಭಾರತಕ್ಕೆ ಬಂದಾಗ, ಅಜ್ಜ-ಅಜ್ಜಿಗೆ ಇಂಗ್ಲೀಷ್ ಬರುವುದಿಲ್ಲ ಎಂಬ ಕಾರಣಕ್ಕೆ, ಅಮ್ಮನ ಒತ್ತಾಯಕ್ಕೆ ಕನ್ನಡ ಮಾತನಾಡುತ್ತಾರೆ. ಅವರ 'ನನ್ ಖೇಯ್, ನನ್ ಕ್ಯಾಲ್' ಎಂಬ ಉಚ್ಚಾರ ಕೇಳುವುದಕ್ಕೆ ತಮಾಷೆಯಾಗಿರುತ್ತದೆ, ಆದರೆ ಅಷ್ಟಾದರೂ ಕನ್ನಡ ಮಾತನಾಡುತ್ತಾರಲ್ಲ ಎಂಬುದೊಂದು ಸಮಾಧಾನ. ಏಕೆಂದರೆ ಈಗೀಗ ಹೊರ ದೇಶಗಳಲ್ಲಿ ಹೋಗಲಿ, ಬೆಂಗಳೂರಲ್ಲಿ ಸಹ ಇಬ್ಬರು ಕನ್ನಡಿಗ ಮಕ್ಕಳು ಸೇರಿದರೆ, ಅವರು ಮಾತನಾಡುವುದು ಇಂಗ್ಲೀಷಿನಲ್ಲಿ. ಗೆಳೆಯನ ಧಾರವಾಡ ಕನ್ನಡ ಮಂಡ್ಯದ ಹುಡುಗನಿಗೆ ಬರುವುದಿಲ್ಲ, ಗೆಳತಿ ಮನೆಯಲ್ಲಾಡುವ ಕುಂದಾಪುರ ಕನ್ನಡ ಹವ್ಯಕರ ಹುಡುಗಿಗೆ ಗೊತ್ತಿಲ್ಲ. ಇನ್ನು ಬೆಂಗಳೂರಿನ ಸ್ಥಳೀಯ ಕನ್ನಡವೋ, ಅದಕ್ಕೆ ಸ್ವಂತಿಕೆಯೇ ಇಲ್ಲ!
ತೇಜಸ್ವಿಯವರ ಪುಸ್ತಕಗಳನ್ನು ಮಗ ಎಂದು ಓದುತ್ತಾನೋ ಗೊತ್ತಿಲ್ಲ, ಹಳ್ಳಿಗೆ ಹೋದಾಗ ಬೋರ್ಡ್ ನೋಡಿಕೊಂಡು ಬಸ್ ಹತ್ತುವಷ್ಟಾದರೂ ಗೊತ್ತಿರಲಿ ಎಂದು ಪ್ರತಿಬಾರಿ ರಜೆ ಬಂದಾಗಲೂ ಅವನ ಕನ್ನಡ ವರ್ಣಮಾಲೆ, ಕಾಗುಣಿತ ತಿದ್ದಿ ತೀಡುವ ಕಾರ್ಯಕ್ರಮ ತಪ್ಪದೇ ಹಮ್ಮಿಕೊಳ್ಳುತ್ತೇನೆ. ತಡವರಿಸದೇ, ಅಳುಕದೇ ಅರ್ಧ ಪುಟ ಓದುವಷ್ಟು ಆತ ತಯಾರಾಗುವ ಹೊತ್ತಿಗೆ ರಜೆ ಮುಗಿದು ಮತ್ತೆ ಶಾಲೆ ಶುರುವಾಗುತ್ತದೆ. ಕನ್ನಡ ದೀರ್ಘಕಾಲದ ರಜೆಯ ಮೇಲೆ ತೆರಳುತ್ತದೆ.
-ರೇಖಾ ಹೆಗಡೆ ಬಾಳೇಸರ


ಕನ್ನಡ ಸಂಘ (ಸಿಂಗಪುರ)ದ ದ್ವೈವಾರ್ಷಿಕ ಪತ್ರಿಕೆ 'ಸಿಂಗಾರ'ದಲ್ಲಿ ಪ್ರಕಟಗೊಂಡ ಲೇಖನ

ಮಂಗಳವಾರ, ಜನವರಿ 13, 2015

ಸಲಹೆಯೆಂಬ ಶೂಲ

ಹಕ್ಕುತ್ಯಾಗ ಘೋಷಣೆ: ಈ ಲೇಖನದಲ್ಲಿ ಬರುವ ಉದಾಹರಣೆಗಳು ಯಾವುದೇ ಪ್ರತ್ಯೇಕ ವ್ಯಕ್ತಿಗೆ ಸಂಬಂಧಿಸಿಲ್ಲ. ಅಕಸ್ಮಾತ್ ಯಾರಿಗಾದರೂ ಹೋಲಿಕೆಯಾಗುತ್ತಿದೆಯಾದರೆ ... ಒಂದ್ಕೆಲಸ ಮಾಡಿ, ನಿಡಿದಾದ ಶ್ವಾಸ ತಗೊಂಡು ನಿಧಾನವಾಗಿ ಉಸಿರು ಬಿಡಿ. ಇದನ್ನೇ ಉದ್ದಕ್ಕೂ ಮುಂದುವರೆಸುತ್ತ, 'ಬರೆದಿದ್ದು ನಿಮ್ಮ ಬಗೆಗಲ್ಲ, ಪಕ್ಕದ ಮನೆಯವರ ಬಗ್ಗೆ' ಎಂದುಕೊಂಡು ಪೂರ್ತಿ ಲೇಖನ ಓದಿಬಿಡಿ. ಹೆಚ್ಚುವ(ಉ)ರಿ ಉಪಶಮನಕ್ಕಾಗಿ ಒಂದ್ಲೋಟ ತಂಪು ಮಜ್ಜಿಗೆ ಕುಡಿಯಿರಿ, ಸೌತೆಕಾಯಿ ತಿನ್ನಿ....

ನಾಲ್ಕು ಜನ ಸೇರಿದರೆಂದರೆ ನಲವತ್ತು ವಿಚಾರ ಚರ್ಚೆಯಾಗುತ್ತವೆ. ಅದರಲ್ಲಿ ಅರ್ಧದಷ್ಟು ಸಲಹೆಗೆ ಸಂಬಂಧಿಸಿದ್ದೇ. ಬೇಕಾದ್ದು, ಬೇಡದ್ದು, ಕೇಳಿ ಪಡೆದದ್ದು, ಉಪಯುಕ್ತ ವಿನಿಮಯ, ಉಚಿತವಾಗಿ ಉದುರಿಸಿದ್ದು... ಅಂತೂ ಎಲ್ಲವೂ ಸಲ್ಲುತ್ತವೆ ಇಂಥ ಮಾತುಕತೆಗಳಿಗೆ. 'ಬಿಟ್ಟಿಯಾದ್ರೇನಂತೆ, ವೆರೈಟಿ ಬೇಕು' ಅನ್ನುವವರಿಗೆ ಅದು ಸಿಗುವುದು ಸಲಹೆಗಳಲ್ಲಿ ಮಾತ್ರ. ಆಹಾ! ಏನು ವೈವಿಧ್ಯ, ಏನು ವಿಸ್ತಾರ ಈ ಸಲಹಾಸಮುದ್ರ!
ಹಲವರ ಸಲಹೆಗಳು 'ಹಿತನುಡಿ'ಗಳಿದ್ದಂತೆ. ಅವರು ಪ್ರೀತಿಯಿಂದ ಹೇಳಿದ್ದನ್ನು ಪಾಲಿಸುವುದು ಸುಲಭ, ಪರಿಣಾಮವೂ ಹಿತಕಾರಿ. ಇನ್ನು ಕೆಲವರದ್ದು 'ಹಿತೋಪದೇಶ', ಅವರ ಸಲಹೆಯಲ್ಲಿ ಪ್ರೀತಿ, ಕಾಳಜಿಯ ಜೊತೆಗೆ ಅದನ್ನು ಪಾಲಿಸಬೇಕೆಂಬ ಆಗ್ರಹವೂ ಇರುತ್ತದೆ. ಮತ್ತೊಂದಷ್ಟು ಜನರಿರುತ್ತಾರೆ, ಅವರ ಸಲಹೆ ಹಿತವೂ ಇಲ್ಲ, ಮಿತವೂ ಇಲ್ಲ- ಬರೀ ಉಪದೇಶ ಮಾತ್ರ. ಇಂಥ ಜನ ಸಾಮಾನ್ಯವಾಗಿ 'ನನಗೆಲ್ಲ ಗೊತ್ತು' ಸಿಂಡ್ರೋಂನಿಂದ ಬಳಲುತ್ತಿರುತ್ತಾರೆ. ನಿಮ್ಮ ಎಲ್ಲ ಕಾರ್ಯಗಳನ್ನೂ ಅದಕ್ಕಿಂತ ಚೆನ್ನಾಗಿ (ಅದು ಅವರ ಅಭಿಪ್ರಾಯ!) ಮಾಡುವುದು ಹೇಗೆಂಬ ಸಲಹೆ ಅವರ ಬಳಿ ಸದಾ ಸಿದ್ಧ! ಈ ಸಲಹೆ ಕೊಡುವ ಚಪಲ ಅದೆಷ್ಟು ಇರುತ್ತದೆಂದರೆ ಅವರು ಬಾಯಿ ತೆರೆದಾಗೆಲ್ಲ 'ಸರ್ರ'ಂಥ ಸಲಹಾಮುತ್ತು ಸುರಿಯುವುದಲ್ಲಿ ಸಂದೇಹವಿಲ್ಲ. ನೀವು ಉಣ್ಣೆಯ ಸ್ವೆಟರ್ ಹಾಕಿಕೊಂಡಿರೋ, ಅವರು 'ಇದಕ್ಕಿಂತ ಕ್ಯಾಶ್ಮೀರ್ ಕಾರ್ಡಿಗನ್ ಚೋಲೋದು' ಅನ್ನುತ್ತಾರೆ. ಟ್ರೇನ್ ಟಿಕೆಟ್ ತಗೊಂಡರೆ, 'ಬಸ್ಸಲ್ಲಿ ಹೋಗೋದು ಬೆಟರ್ರು' ಅನ್ನುತ್ತಾರೆ. ಆಸ್ಪಿರಿನ್ ತಗೊಳ್ತಾ ಇದ್ದೀರೋ, 'ಐಬುಪ್ರೊಪೇನ್ ಇನ್ನೂ ಒಳ್ಳೇದು' ಎಂದು ಉಚಿತವಾಗಿ ಉಪದೇಶಿಸುತ್ತಾರೆ.
ಸಲಹೆಯ ಚಟ ಬಹಳಷ್ಟು ಜನರಿಗೆ ಇರುತ್ತದಾದರೂ ಅದನ್ನು ಕೊಡುವ, ಪಡೆಯುವ ಸಂಭವ ಹೆಂಗಸರಲ್ಲೇ ಹೆಚ್ಚು. ಮೊದಲೇ ಮಾತು ಜಾಸ್ತಿ, ಮೇಲಿಂದ ಊರ ಮೇಲಿನ ಸುದ್ದಿ ಕೇಳುವ, ಹೇಳುವ ಹಂಬಲ ಬೇರೆ... ಕೆಲವರಿಗೆ ಮೈ-ಮಂಡೆ ಶೃಂಗಾರದಲ್ಲಿ ಆಸಕ್ತಿ. 'ತಲೆ ಸ್ನಾನಕ್ಕೆ ಮೊದ್ಲು ಸ್ವಲ್ಪ ಮೊಸರು ಹಚ್ಕೊಂಡ್ರೆ ಕಂಡೀಶನ್ ಆಗುತ್ತೆ', 'ನಿಂಬೆರಸ ತಿಕ್ಕಿಕೊಂಡ್ರೆ ಚರ್ಮದ ಮೇಲಿನ ಕಪ್ಪು ಕಲೆ ಬಿಟ್ಟೋಗತ್ತೆ' ಎಂದು ಪಟ್ಟಿ ಮಾಡುವ 'ಚಂದ ಚಕೋರಿ'ಯರು ಅವರು. ಕೆಲವರು ದುಡ್ಡು, ಕಾಸು, ಚೌಕಾಸಿ ಲೆಕ್ಕಾಚಾರದಲ್ಲಿ ತೀರಾ ಚುರುಕು- 'ಶೆಟ್ಟಿ ಅಂಗಡೀಲಿ ಅಕ್ಕಿ ತಗೋಬೇಡಿ, ರೇಟು ಜಾಸ್ತಿ', 'ಭಟ್ರ ಅಂಗಡೀಗೆ ಬುಧವಾರ ಬೆಳಿಗ್ಗೆ ಹೋಗಿ, ತಾಜಾ ತರಕಾರಿ ಸಿಗುತ್ತೆ'ಯಂಥ ವಿತ್ತ ಸಂಬಂಧಿ ಉಪದೇಶಗಳು ಅಂಥವರಿಂದ ಬರೋದು. 'ಅಯ್ಯೋ, ಅವಳತ್ರ ಏನೂ ಹೇಳ್ಬೇಡಿ; ಊರಿಗೆಲ್ಲ ಹರಡ್ತಾಳೆ', 'ಆ ಮಗು ಭಾರೀ ಹಠಮಾರಿ, ನಿಮ್ಮಗೂನ್ನ ಅದ್ರ ಹತ್ರ ಸೇರಿಸ್ಬೇಡಿ'ಯಂಥ ಹುಳುಕು ಸಲಹೆ ಕೊಡೋರೂ ಕಮ್ಮಿಯಿಲ್ಲ.
ಇನ್ನು ಬಸುರಿಯಾದರನ್ತೂ ಸಲಹೆಗಳ ಸುರಿಮಳೆಯೇ ಸುತ್ತೆಲ್ಲ ಕವಿದುಕೊಳ್ಳುತ್ತದೆ. ಹೋದಲ್ಲಿ ಬಂದಲ್ಲೆಲ್ಲ, ಕುಂತಲ್ಲಿ ನಿಂತಲ್ಲೆಲ್ಲ ಆಪ್ತ ಸಲಹೆಗಳೆಂಬ ಆಲಿಕಲ್ಲಿಗಳ ಧಪಧಪ ದಾಳಿ. "ಓ, ಪ್ರೆಗ್ನನ್ಸಿ ಖಾತ್ರಿ ಆಯ್ತಾ, ಇನ್ನು ಭಾರಿ ಹುಶಾರಿ ಇರ್ಬೇಕು ನೀವು, ಬೆಳ್ಳುಳ್ಳಿ, ಹಸಿಮೆಣಸು, ಪಪ್ಪಾಯಿ ತಿನ್ಬೇಡಿ' ಎಂಬಲ್ಲಿಂದ ಶುರುವಾದರೆ... 'ಕಾಯಿ ತುರೀಬೇಡಿ, ನೀರು ಸೇದಬೇಡಿ, ಬಿರುಸಾಗಿ ನಡೀಬೇಡಿ, ಏಕ್‍ದಂ ಏಳಬೇಡಿ'...ಗಳಂಥ 'ಬೇಡ'ಗಳೂ, 'ಕೇಸರಿ ಹಾಲು ಕುಡೀಬೇಕು, ತುಪ್ಪ ಜಾಸ್ತಿ ತಿನ್ನಬೇಕು, ದಿನಾ ವಾಕ್ ಮಾಡಬೇಕು, ಪುರಾಣ ಪುಣ್ಯ ಕಥೆ ಓದಬೇಕು...'ಗಳಂಥ 'ಬೇಕು'ಗಳೂ ಸಾಧ್ಯವಿರೋ ಎಲ್ಲಾ ದಿಕ್ಕು, ಮೂಲಗಳಿಂದ ಯಥೇಚ್ಛ ಪ್ರವಾಹೋಪಾದಿಯಲ್ಲಿ ಹರಿದು ಬಂದು ತೋಯ್ದು ತೊಪ್ಪೆಯಾಗಿಸುತ್ತವೆ.
ಜನರಿಗೆ (ಸ್ತ್ರೀ ಜಾತಿಗೆ ಎಂದು ಓದಿಕೊಳ್ಳಿ) ಬಸುರಿ ಹೆಂಗಸಿನ ಪರಿಚಯವೇ ಇರಬೇಕೆಂದಿಲ್ಲ. ಬಸ್ ನಿಲ್ದಾಣದಲ್ಲೋ, ಮಾರುಕಟ್ಟೆಯಲ್ಲೋ, ಮದುವೆ ಮನೆಯಲ್ಲೋ ಎಲ್ಲಾದರೂ ಸರಿ, ಕೊಂಚ ಉಬ್ಬಿದ ಹೊಟ್ಟೆ, ಬಸವಳಿದ ಮುಖ ಕಂಡರೆ ಸಾಕು, ಒಂದು ಮಂದಹಾಸ ತೂರಿ 'ಎಷ್ಟು ತಿಂಗಳು' ಎನ್ನುತ್ತ ಮಾತಿಗೆ ಶುರುವಿಟ್ಟುಕೊಳ್ಳುತ್ತಾರೆ. 'ಇಂತಿಷ್ಟು..' ಎಂಬ ಉತ್ತರ ಮುಗಿಯುವುದರೊಳಗೆ ಅವರದ್ದೊಂದು ಸಲಹೆ ಸಿದ್ಧವಿರುತ್ತದೆ, 'ದಿನಾ ಪಾಲಕ್ ತಿನ್ನಿ.. ಕಬ್ಬಿಣಾಂಶ ಇರುತ್ತೆ, ಒಂದೆಲಗ ಸೇವಿಸಿ.. ಮಗೂಗೆ ನೆನಪಿನ ಶಕ್ತಿ ಚೆನ್ನಾಗಿರುತ್ತೆ'... ಹಾಗೆ ಹೀಗೆ...! ವಯಸ್ಸಾದ ಹೆಂಗಸರು, ಎರಡೋ ನಾಲ್ಕೋ ಹೆತ್ತ ಮಾತೆಯರು ಹೇಳಿದರೆ ಅದು ಅವರ 'ಅನುಭವ ನೀಡಿದ ಹಕ್ಕು' ಎಂದುಕೊಳ್ಳಬಹುದು, ಆದರೆ ಇನ್ನೂ ಮದುವೆಯೂ ಆಗಿರದ ಕಿರಿಯರು, ಕುಮಾರಿಯರು ಕೂಡ ಬಂದು ಸೆಕೆಂಡ್ ಹ್ಯಾಂಡ್ ಸಲಹೆ ಕೊಟ್ಟಾಗ ಮೊದಲೇ ಓವರ್ ಡೋಸ್ ಅನುಭವಿಸುತ್ತಿರುವ ಭಾವಿ ತಾಯಂದಿರು ಭುಸುಗುಟ್ಟಿದರೆ ಆಶ್ಚರ್ಯವಿಲ್ಲ.
ಬಾಣಂತಿಯರದ್ದು ಇನ್ನೊಂದು ಅವಸ್ಥೆ. ಮೊದಲೇ ಹೊಸ ಮಗುವಿನ ಅಳಾಣಕ್ಕೆ, ಅವಶ್ಯಕತೆಗಳಿಗೆ ಹೊಂದಿಕೊಳ್ಳಲಾಗದೇ ಒದ್ದಾಡುತ್ತಿರುತ್ತಾರೆ. ಮೇಲಿಂದ 'ಮಾತಾಡಿಸಿಕೊಂಡು ಹೋಗಲು' ಬರುವ ಮಹಾತಾಯಿಯರ ಸಲಹಾ ಪ್ರಹಾರ ಬೇರೆ.... 'ಬಾಳೆಹಣ್ಣು ತಿನ್ನಬೇಡ, ಶಿಶುಗೆ ಶೀತವಾಗುತ್ತೆ' ಎಂದು ಒಬ್ಬರೆಂದರೆ, 'ಬಾಳೆಹಣ್ಣು ಚೆನ್ನಾಗಿ ತಿನ್ನು, ಮಗೂಗೆ ಮಲಬದ್ಧತೆ ಬರೋಲ್ಲ' ಎಂಬ ಉಲ್ಟಾ ದಿಕ್ಕಿನ ಉಪದೇಶ ಕೊಡೋರು ಇನ್ನೊಬ್ಬರು. ಈ ಶೀತ, ಉಷ್ಣ, ಕಫ, ಪಿತ್ತ ಎಂಬೆಲ್ಲ ಕಾರಣ ಎತ್ತಿಕೊಂಡು ತಲೆಗೊಂದು ಸಲಹೆ ಕೊಟ್ಟು, ತಿನ್ನೋ ಅನ್ನ-ಊಟದ ವಿಷಯದಲ್ಲೂ ತಲೆಬೇನೆ ತಗುಲಿಸಿಬಿಡುತ್ತಾರೆ. 'ಕಿವಿಗೊಡೋದೇ ಬೇಡ' ಎಂದು ಕೊಡವಿಕೊಂಡು ನಡೆಯಲೂ ಹೆದರಿಕೆ, ಮಗುವಿನ ಮೇಲೆ ಪರಿಣಾಮ ಬೀರುತ್ತಲ್ಲ ಎಂದು. ಕಿವಿಗೊಟ್ಟರೆ ಬಾಣಂತಿಯ ತಲೆ ಮೇಲೆ ಬಿಟ್ಟಿ ಸಲಹೆಗಳ ಬೇಣ ಬೆಳೆಯುವುದು ಖಂಡಿತ.
ನಾವು ಗಂಡ-ಹೆಂಡತಿ ಮದುವೆಯಾದ ಹೊಸದರಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಿಡಿದಿದ್ದೆವು. ಮನೆಯ ಯಜಮಾನರ ಮಗನಿಗೆ ಸಿಕ್ಕಾಪಟ್ಟೆ 'ಸಲಹಾ ಸಿಂಡ್ರೋಂ'! ನಮಗೆ ಜಾಸ್ತಿ ರಜ ಇರಲಿಲ್ಲವಾದ್ದರಿಂದ ಗಡಿಬಿಡಿಯಲ್ಲಿ ಒಂದೆರಡು ಅಂಗಡಿ ತಿರುಗಿ ಪಾತ್ರೆ-ಪಗಡೆ, ಫ್ರಿಡ್ಜು, ಟಿವಿ, ಮಂಚ, ಕಪಾಟು ಅಂತೆಲ್ಲ ಖರೀದಿಸಿಕೊಂಡು ಬಂದೆವು. ಮನೆಗೆ ಬಂದು ಸಜ್ಜುಗೊಳಿಸಲು ಶುರುಮಾಡಿದ್ದೇ ಈ ವ್ಯಕ್ತಿ ಬಂದು ತಲಾ ಒಂದೊಂದು ಐಟಮ್ ಮೇಲೆ ಅರ್ಧರ್ಧ ತಾಸು 'ಇದಲ್ಲ, ಅದು ತಗೋಬೇಕಿತ್ತು' ಎಂದು ಸಲಹಾಬಾಂಬ್ ಸುರಿಮಳೆಗೈದರು. 'ಅಗತ್ಯ ಐಟಮ್ ಎಲ್ಲ ಬಂದವಲ್ಲ' ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದ ನಾವು 'ಈ ಅನಗತ್ಯ 'ಐಟಮ್' ಬಂದಿದ್ದಕ್ಕೆ ಏನು ಮಾಡೋದು' ಎಂದು ತಿಳಿಯದೇ ತಲೆ ಕೆರೆದುಕೊಂಡೆವು. ಆ ಮನೆಯಲ್ಲಿ ಉಳಿದಷ್ಟೂ ದಿನ ಅವರ ಸಲಹೆಯ ಶೂಲ ನಮ್ಮನ್ನು ಚುಚ್ಚುತ್ತಲೇ ಇತ್ತು. ಆದರೆ ಆ ಜನ ಮಿಕ್ಕೆಲ್ಲಾ ವಿಷಯಕ್ಕೆ ಒಳ್ಳೆಯವರಿದ್ದರಿಂದ ನಾವೂ ಬಿಟ್ಟಿ ಸಲಹೆ ನುಂಗುತ್ತ ನಾಲ್ಕು ವರ್ಷ ಗಟ್ಟಿಯಾಗಿ ಅಲ್ಲೇ ಉಳಿದೆವು.
ಈ ಸಲಹೆಯ ಚಟ ಒಂಥರಾ ಅಂಟುಜಾಡ್ಯವಿದ್ದಂತೆ, ಸಲಹೆಯ ಶೂಲೆಗೆ ತುತ್ತಾದವರು ತಮಗರಿವಿಲ್ಲದಂತೆ ಅದನ್ನು ಅಳವಡಿಸಿಕೊಂಡು, ಇನ್ನೊಬ್ಬರಿಗೆ ದಾಟಿಸುತ್ತಾರೆ. ಆಫೀಸಿನಲ್ಲಿ ಸದಾ ಮೇಲಧಿಕಾರಿಯ (ಬೇಕಾ)ಬಿಟ್ಟಿ ಸಲಹೆಗಳಿಗೆ ತಲೆ ಒಡ್ಡುವ ಪತಿ, ಮನೆಗೆ ಬರುತ್ತಿದ್ದಂತೆ ಅದೇ ಮಾದರಿಯಲ್ಲಿ 'ಈ ಕೆಲಸ ಹೀಂಗಿದ್ರೆ ಸರಿ ಇರ್ತು ನೋಡು, ಹಾಂಗಲ್ಲ' ಎಂದು ನನ್ನ ಮೇಲೆರಗುವ ಸಲಹಾಶೂಲ. ಆಮೇಲೆ ತಾವೂ ಮನೆಯಲ್ಲಿ 'ಬಾಸ್' ಆಗುತ್ತಿರುವುದು ಲಕ್ಷ್ಯಕ್ಕೆ ಬರುತ್ತಿದ್ದಂತೆ 'ಥೋ ಮಾರಾಯ್ತಿ....' ಎಂದು ನಕ್ಕು ಹಗುರಾಗುವ ಹತ್ತಿ. ಆ ಸಲಹೆಗಳೆಲ್ಲ ನನ್ನ ಕಿವಿಯಿಂದ ತಲೆಯೆಂಬೋ ಸುರಂಗ ಹೊಕ್ಕಿ ಬಾಯಿ ಮೂಲಕ ಮಗನ ತಲುಪುವುದು ಸರಣಿ ಪ್ರಕ್ರಿಯೆಯ ಮುಂದಿನ ಹಂತ.
ಸಲಹಾ ಚಟ ನಮ್ಮೂರು, ನಮ್ಮ ಜನರಿಗಷ್ಟೇ ಅಂಟಿಕೊಂಡಿಲ್ಲ, ಇದರದ್ದು ಗ್ಲೋಬಲ್ ಔಟ್‍‌ರೀಚ್. ಸಿಂಗಪುರಕ್ಕೆ ಬಂದ ಹೊಸದರಲ್ಲಿ ಮಗನೊಂದಿಗೆ ಬಸ್ಸಿನಲ್ಲಿ ಪಯಣಿಸುತ್ತಿದ್ದೆ. ಪಕ್ಕದಲ್ಲಿದ್ದ ಸಿಂಗಪುರಿಯನ್ ಅಜ್ಜಿ, 'ಒನ್ ಚೈಲ್ಡ್?' ಎಂದು ಪ್ರಶ್ನಿಸಿದಳು. ಹೌದೆಂದೆ. 'ಒನ್ ಚೈಲ್ಡ್, ನೋ ಗೂ...(ಡ್)' ಎಂದಳು. ಅಪರಿಚಿತೆ ಅಜ್ಜಿಯ ಮಾತಿಗೆ ಏನೆನ್ನಬೇಕು ತಿಳಿಯದೇ ಸುಮ್ಮನೆ ನಗೆ ಬೀರಿದೆ. 'ಬಿಕಾಸ್ ಸಿಂಗಲ್ ಚೈಲ್ಡಾ..., ಗೋ ಅಬ್ರಾಡ್, ಗೋ ಅವೇ! ಮೋರ್ ಚಿಲ್ಡ್ರನ್ನಾ...., ಸ್ಟೇ ಕ್ಲೋಸ್, ಟೇಕ್ ಕೇರ್' ಆಕೆ ಮುಂದುವರೆಸಿದಳು. ವಿಭಕ್ತಿ ಪ್ರತ್ಯಯಗಳನ್ನೆಲ್ಲ ಉಳಿತಾಯ ಮಾಡಿ ಕರ್ತೃ, ಕರ್ಮ ಮಾತ್ರ ಬಳಸುವ ಪಕ್ಕಾ ಸಿಂಗ್ಲೀಷ್ (ಸಿಂಗಪುರದ ಮ್ಯಾಂಡರಿನ್, ಮಲಯ್ ಮಿಶ್ರಿತ ಇಂಗ್ಲೀಷ್) ಅನ್ನು ನಿಧಾನಕ್ಕೆ ಜೀರ್ಣಿಸಿಕೊಳ್ಳುವಷ್ಟರಲ್ಲಿ ಅಜ್ಜಿಯ ಸಲಹೆ ತೂರಿ ಬಂತು, 'ಹ್ಯಾವ್ ಮೋರ್ ಚಿಲ್ಡ್ರನ್ ಲಾ!... ಗೂ...(ಡ್) ಫಾರ್ ಯೂ'. ಸುಪರ್ ಮಾರ್ಕೆಟಿನಲ್ಲಿ ಹಣ್ಣು, ತರಕಾರಿ ತೂಕ ಮಾಡಿಕೊಡುವ ಅಜ್ಜಿ, 'ದಿ(ಸ್) ವನ್ನಾ.., ವೆರಿ ಬಿತ್ತ...(ರ್)... ಬ(ಟ್) ಗುಡ್ಡಾ!... ದ್ಯಾ(ಟ್) ವನ್ನಾ..., ಟೂ ಸೌರ್... ನಾ(ಟ್) ತೇಸ್ತೀ ಲಾ...!' ಎನ್ನುತ್ತ ತೂಕದ ಚೀಟಿಯ ಜೊತೆಗೆ ಸಲಹೆಯನ್ನೂ ಅಂಟಿಸಿಕೊಡುತ್ತಾಳೆ. ಸೈಕಲ್ ಸವಾರಿಗೆ ಹೋದಾಗ ಸೀಟಿನ ಎತ್ತರ/ತಗ್ಗು ಬಗ್ಗೆ ಉದ್ದುದ್ದ ಉಪದೇಶಿಸುವ ಸಹಸೈಕಲಿಗ ಹಿರಿಯರು, ಟ್ಯಾಕ್ಸಿಯಲ್ಲಿ ಕುಳಿತಾಗ 'ಸಿಂಗಪೂರ್ ವೆರಿ ಗೂ...(ಡ್), ಟೇಕ್ ಪಿಆರ್ (ಶಾಶ್ವತ ನಿವಾಸಿ ಸ್ಥಾನಮಾನ) ಲಾ!' ಎಂಬ ಕೆಲ ಚಾಲಕರು... ಎಲ್ಲರಿದ್ದೂ ಇದೇ ಕಥೆ!
ಹಾಗಂತ ಎಲ್ಲ ಸಲಹೆಗಳೂ ಬಿಟ್ಟಿ-ಬೇಕಾಬಿಟ್ಟಿ ಎಂದೇನಲ್ಲ. ಇದಕ್ಕೂ ಇತಿಹಾಸ ಇದೆ, ಘನತೆ-ಮಾನ್ಯತೆ ಇದೆ. ದೇವ-ದಾನವರಿಗೆ ರಾಜಗುರುಗಳಾಗಿದ್ದ ಬೃಹಸ್ಪತಿ, ಶುಕ್ರಾಚಾರ್ಯರು, ವಶಿಷ್ಠ, ನಾರದರು ಇವರೆಲ್ಲರ ಸಲಹೆಗಳಿಗೆ ಮಾನ್ಯತೆ ನೀಡುತ್ತಿದ್ದ ಅಪಾರ ಶಿಷ್ಯವರ್ಗವಿತ್ತು. ಕೌರವರಲ್ಲಿ ವಿವೇಚನೆ ತುಂಬಲೆತ್ನಿಸಿದ ವಿದುರ, ಚಂದ್ರಗುಪ್ತ ಮೌರ್ಯನ ಏಳಿಗೆಯಲ್ಲಿ ಮಹತ್ತರ ಪಾಲು ವಹಿಸಿದ ಚಾಣಕ್ಯ ಇವರೆಲ್ಲ ಸಲಹೆಗಾರರದ ಹುದ್ದೆಗೆ ಘನತೆ ತುಂಬಿದವರು. ಪುರಾಣ, ಚರಿತ್ರೆಯ ಉದ್ದಕ್ಕೂ ಆಡಳಿತಗಾರರ ಮೆದುಳಾಗಿ ಮೇಧಾವಿ ಸಲಹಾಗಾರರಿದ್ದರು. ಬೀರಬಲ್, ಬೆಂಜಮಿನ್ ಫ್ರಾಂಕ್ಲಿನ್, ಬಿಸ್ಮಾರ್ಕ್ ಅವರಂಥ ಸಮಾಜಮುಖಿ ಸಲಹೆಗಾರರಿದ್ದಂತೆಯೇ ಶಕುನಿ, ಮಂಥರೆ, ಮಾಕಿಯಾವೆಲ್ಲಿ, ರಾಸ್ಪುಟಿನ್‍ರಂಥ ವಿವಾದಾತ್ಮಕ ವ್ಯಕ್ತಿಗಳೂ ಇದ್ದರು. ಸಲಹೆ ಪಡೆದವರಲ್ಲಿ ಹಂಸಕ್ಷೀರ ನ್ಯಾಯ ಮಾಡಲು ತಿಳಿದವರು ಗೆದ್ದರು, ಉಳಿದವರು ಬಿದ್ದರು. ಇವತ್ತು ವಾಣಿಜ್ಯ, ಭದ್ರತೆ, ಕಾನೂನು, ಶಿಕ್ಷಣ.... ಹೀಗೆ ಸಮಾಜದ ಎಲ್ಲ ರಂಗಗಳಲ್ಲಿ, ಸರ್ಕಾರದ ಎಲ್ಲ ಅಂಗಗಳಲ್ಲಿ ಸಲಹೆಗಾರರ ಪ್ರತಿಷ್ಠಿತ ಹುದ್ದೆಗಳಿವೆ. ಆ ಹುದ್ದೆಗಳನ್ನು ತಲುಪಲು ಸೂಕ್ತ ಶಿಕ್ಷಣ, ಅನುಭವದ ಅಗತ್ಯ ಇದೆ. ಅವರ ಸಲಹೆಗಳೂ ಬಿಟ್ಟಿಯಾಗಿ ಸಿಗುವಂಥದ್ದಲ್ಲ, ಕೈತುಂಬ ಸಂಬಳ, ಗೌರವಧನ ಇದೆ.

ಸಿನೆಮಾ ಡೈಲಾಗ್ ಒಂದನ್ನು ಅನುಸರಿಸಿ ಹೇಳಬೇಕೆಂದರೆ: ಈ ಜಗತ್ತಿನಲ್ಲಿ ಎರಡು ತರಹದ ಸಲಹೆಗಳು ಇರುತ್ತವೆ. ಒಂದು ಕಸುವಾಗಿದ್ದು ಕಾಸು ಗಳಿಸುವಂಥವು; ಇನ್ನೊಂದು ಬಿಟ್ಟಿ- ಗಿರಗಿಟ್ಟಿ!!


(ಈ ಲೇಖನ 'ಪ್ರಜಾವಾಣಿ'ಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ದಿನ ಅಂದರೆ ೧೬ನೇ ನವೆಂಬರ್ ೨೦೧೪ರಂದೇ ನನ್ನ ಮಗಳೂ ಈ ಲೋಕದ ಬೆಳಕು ನೋಡಿದ್ದು. ಅವತ್ತು 'ಡಬಲ್ ಬೊನಾಂಝಾ' ನನ್ನ ಪಾಲಿಗೆ.) 

ಬುಧವಾರ, ಜೂನ್ 4, 2014

ಸ್ನೇಲ್ ರೈಲ್

ನನಗಿಲ್ಲಿ ಕ್ಯಾಪ್ಟನ್ ಖುದ್ದೂಸನ ಘಾಟಿ ಎಕ್ಸ್ಪ್ರೆಸ್ ಮಿಸ್ಸಾಗುವುದಿಲ್ಲ 
ಯಾಕೆಂದರೆ ರೆಡ್ ಲೈನ್ ಎಮ್ಮಾರ್ಟಿ ರೈಲು ಇದೆಯಲ್ಲ!

ಸೋಮವಾರ, ಫೆಬ್ರವರಿ 17, 2014

‘ಹಣೆಬರಾ ಅಳ್ಚಕಾಗ್ತದ್ಯ’

‘ಅಮಾ, ನಾ ಬಂದನ್ರೋ……..’ಧೋ…ಗುಡುವ ಮಳೆಯ ಜೋಗುಳದ ಹಿನ್ನೆಲೆಯಲ್ಲಿ ಮಲಗಿದ್ದವಳನ್ನು ಬಡಿದೆಬ್ಬಿಸಿದ್ದು ಗಡಸು ದನಿಯ ಸುಪ್ರಭಾತ. ‘ಹೋ ಮಾದೇವಿ, ಇಂಥಾ ಮಳೆಲ್ಲೂ ಇಷ್ಟು ಬ್ಯಾಗ ಬಂದ್ಯನೆ. ನಮ್ಮನೆ ಹಿಳ್ಳೆ, ಬಾಳಂತಿಗೆ ಇನ್ನೂ ಬೆಳಗೇ ಆಗಿಲ್ಲ’ ಅಂಗಳದಲ್ಲಿ ಅಮ್ಮನ ಸ್ವಾಗತ.’ಮಳೆಯಾರೆಂಥು, ಬಿಸ್ಲಾರೆಂಥು? ನಮ್ ಕೆಲ್ಸಕ್ಕೆ ನಾವು ಬರದೇರಾ. ತಂಗಿ ಯಂಥ ಒಂಬತ್ತಾದ್ರೂ ಇನ್ನೂ ಮಲ್ಕಂಡದೆ? ಮೀಸಿ ಮಲಗ್ಸದ್ಯಾವಾಗ? ಬ್ಯಾಗ ಯಬ್ಬಿಸ್ನಿ ವೇದಮಾ”ಅದ್ರ ಗಂಡ ರಾತ್ರೆ ಫೋನ್ ಮಾಡಿ ತಾಸುಗಟ್ಲೆ ಮಾತಾಡ್ತಿದ್ದ. ಮಾಣಿನೂ ರಾತ್ರ್ಯೆಲ್ಲಾ ಎದ್ಕತ್ತಿದ್ದಿದ್ದಾ. ಬೆಳಗಿನ್ ಜಾವದಲ್ಲಿ ಇಬ್ರೂ ಮಲ್ಕಂಡಾರೆ, ಹಂಗಾಗಿ ಇನ್ನೂ ಎಬ್ಸಿಲ್ಲಾ’ ಅಮ್ಮನ ಸಮಝಾಯಿಷಿ.’ಆದ್ರೂ ನಿಮ್ಮನೆ ಬಾಳಂತಿಗೆ ಬ್ಯಳಗಾಗದು ಹನಿ ತಡಾನೇ ಅಂತ್ನಿ’ ಮಾದೇವಿಯ ಆಕ್ಷೇಪಪೂರ್ವಕ ಒಬ್ಸರ್ವೇಶನ್.
ಇನ್ನೂ ಮಲಗಿದ್ರೆ ಊಊಊದ್ದನೆಯ ಭಾಷಣ ಕೇಳಬೇಕಾದೀತೆಂದು ಧಡಕ್ಕನೆ ಎದ್ದು ಬ್ರಷ್ಷು ಹಿಡಿದು ಬಚ್ಚಲ ಕಡೆ ಹೊರಟೆ. ಹಿತ್ಲಾಕಡೆ ಒಳದಲ್ಲಿ ಕುಕ್ಕುರುಗಾಲಲ್ಲಿ ಕುಂತು ಚಾ ಹೀರುತ್ತಿದ್ದ ಮಾದೇವಿ ಮುಂದುವರೆಸಿದ್ದಳು, ‘ನೀವು ಯಂಥದೇ ಹೇಳಿ, ಪ್ಯಾಟೆ ಕಂಡು ಬಂದವ್ಕೆ ಬ್ಯಾಗ ಬ್ಯಳಗಾಗಕಲ್ಲ. ನಮ್ಮನ್ಯಾಗೂ ಐದಾನೆ ಒಬ್ಬಂವಾ. ರಾತ್ರೆ ಬ್ಯಾಗ ಮಲ್ಗಾಕಲ್ಲ, ಬ್ಯಳಿಗ್ಗೆ ಯೋಳಾಕಲ್ಲಾ. ಈ ಪ್ಯಾಟೆ ಮ್ಯಾಲಿನ ಗಾಳಿ ತಾಗಿರೆ…… ”ಹೋ ಮಾದೇವಿ, ನಾ ಆಗಲೇ ಎದ್ದಾಗದೆ. ಮಾಣಿ ಕೊಂಯ್ಗುಟ್ದಾಂಗಾತು, ಹಂಗಾಗಿ ಅಲ್ಲೇ ಕುಂತಿದ್ದೆ’ ಮಾತಿನ ಧಾರೆಯನ್ನು ಕತ್ತರಿಸುತ್ತ ಹೇಳಿದೆ.’ಹಂಗಾರೆ ಯಬ್ಸಿಕ್ಯಂಡು ಬರುದ. ಜಗಿಸಿಕ್ಯಂಡು ಹಾಂಗೇ ಎಣ್ಣಿ ಹಚ್ಚಿ ಮೀಸುಕಾಗ್ತಿತ್ತು’ ಮಾದೇವಿ ಮುಂದುವರೆಸಿದಳು. ಅವಳು ‘ಜಗಿಸುದು’ ಅಂದಿದ್ದಕ್ಕೆ ಹಣೆ ಸಿಂಡರಿಸಿಕೊಳ್ಳುತ್ತ ‘ತಡ್ಕ ಮಾರಾಯ್ತಿ. ಸ್ವಲ್ಪ ಶಾಂತಿಂದ ಆಸ್ರಿಗೆ ಕುಡ್ಕಂತೆ. ಕಡಿಗೆ ಎಬ್ಸುವ ಅಂವನ್ನಾ’ ಎಂದೆ. ಚಾ ಮುಗಿಸಿ ಲೋಟ ತೊಳೆಯುತ್ತಿದ್ದ ಮಾದೇವಿ, ‘ಹಂಗಾರೆ ಉಚ್ಚೆ ವಸ್ತ್ರ ತೊಳಿತ್ನಿ ಮದ್ಲು’ ಎಂದಳು.’ಹಾಂಗೇ ಸ್ವಲ್ಪ ಬಚ್ಚಲು ಬೆಂಕಿ, ಹೊಡ್ತಲ ಬೆಂಕಿ ಘನಾಕೆ ಕತ್ಸು ಮಾರಾಯ್ತಿ. ರಾತ್ರಿ ಮಳೆಗೆ ಸೌದೆ ರಾಶಿಯೆಲ್ಲಾ ಒಬ್ಬಶಿ ಆಗೋಗದೆ. ಒಲೆ ಬೆಂಕಿ ಕತ್ತಾನೆ ಇಲ್ಲ. ಉಬಿಸಿ ಉಬಿಸಿ ಸಾಕಾತು’ ನಿಟ್ಟುಸಿರುಗರೆದಳು ಅಮ್ಮ. ‘ಥೋ, ನಮ್ಮನ್ಯಾಗೂ ಹಾಂಗೇರಾ, ನಾಕ್ ದಿನಾ ನೇರ್ತಾ ಬಿಸ್ಲಿಗ್ ಹಾಕಿರೂ ಬೆಂಕಿ ವಟ್ಟಾಕ್ ಬರದು ಯಂಥನ…’ ಸೋಗುಟ್ಟುತ್ತ ಕಟ್ಟಿಗೆ ಮನೆ ಕಡೆ ಹೋದಳು ಮಾದೇವಿ.
ಆಸ್ರಿಗೆ ಕುಡಿತಾ ಕುಳಿತವಳಿಗೆ ಬಚ್ಚಲ ಕಡೆಯಿಂದ ಮಾದೇವಿಯ ದನಿ ಕೇಳಿಸುತ್ತಿತ್ತು. ಹೆಚ್ಚು ಕಮ್ಮಿ ನನ್ನಮ್ಮನ ವಯಸ್ಸಿನವಳೇ ಆದ ಮಾದೇವಿ ಹೋದಲ್ಲೆಲ್ಲ ಮಾತು, ಮಾತು… ಹತ್ತು ಹಳ್ಳಿ ಸುತ್ತಿ ಚಾಕರಿ ಮಾಡುವುದರಿಂದ ಊರ ಮೇಲಿನ ಸುದ್ದಿಯೆಲ್ಲ ನಾಲಿಗೆ ತುದಿಯಲ್ಲೇ. ದಟ್ಟ ಕಪ್ಪು ಮೈಬಣ್ಣ, ಮುಕ್ಕಾಲುವಶಿ ನೆರೆತ ತಲೆ, ಸಣಕಲು ಮೈಗೆ ಒಂಚೂರು ಹೊಂದಿಕೆಯಾಗದ ಗಡಸಾದ ದನಿ. ಉಬಿಸಿದರೆ ಹಾರಿ ಹೋಗುವಂಥ ಕಾಯದಲ್ಲಿ ಅದೇನು ಶಕ್ತಿಯೋ, ಸದಾಕಾಲ ಮೈಮುರಿದು ದುಡಿಯುವ ‘ದುಡಿವಾನಿ’. ಸ್ವಂತದ ಮನೆ ಬಿಟ್ಟರೆ ಬೇರೆ ಅಂಗೈ ಅಗಲದ ಜಮೀನೂ ಇಲ್ಲ, ಗಂಡ ಶಣ್ಯನೋ ಪರಮ ದುಪ್ಪಾಳ. ಆಚೀಚೆ ಊರ ದನ ಕಾಯುವುದು ಬಿಟ್ಟರೆ ಬೇರೆ ಕೆಲಸ ಮಾಡಿದ್ದ ದಾಖಲೆಯೇ ಇಲ್ಲ. ಗ್ರಾಮಕ್ಕೆ ಹಾಲಿನ ಡೇರಿ ಬಂದ ಮೇಲೆ ಜನರೆಲ್ಲ ಜಾಸ್ತಿ ಹಾಲು ಕೊಡುವ ಜರ್ಸಿ ದನ ಕಟ್ಟಿ ಮನೆಯಲ್ಲಿ ಆರೈಕೆ ಶುರು ಮಾಡಿದ್ದರಿಂದ ಆ ಕೆಲಸವೂ ಇಲ್ಲವಾಯಿತು. ಮೂರು ಹೊತ್ತು ರೇಡಿಯೋ ಕಿವಿಗಂಟಿಸಿಕೊಂಡು ಕೋಳಿಗಳನ್ನ ಗೂಡಿಂದ ಹೊರಗೆ ಬಿಡೋದು- ಒಳಗೆ ಅಟ್ಟೋದು, ಸಂಜೆ ಗಡದ್ದು ಕುಡಿದು ಹೊಟ್ಟೆಬಿರಿ ಉಂಡು ಮಲಗುವುದು… ಇಷ್ಟೇ ಅವನಿಗಿದ್ದ ಘನಂದಾರಿ ಕೆಲಸ. ‘ಮಾದೇವಿ ದುಡಿದಿದ್ದಕ್ಕೆ ಸೋಂಗೆ ಮನೆ ಮಾಡು ಹೋಗಿ ಹಂಚು ಬಂತು’ ಎನ್ನುವುದು ಊರಲ್ಲಿ ಒಕ್ಕೊರಲಿನ ಮಾತು. ತೆರಡಿಕೆ, ಸೋಂಗೆ ಆರಿಸುವ, ಅಡಿಕೆ-ಚಾಲಿ ಸುಲಿಸುವ, ಕಾಫಿ ಬೀಜ ಬಿಡಿಸುವಂಥ ತೋಟದ ಮೇಲಿನ ಚಾಕರಿ ಜೊತೆ ಅಂಗಳ ತೊಡೆಯುವ, ಅಕ್ಕಿ ಆರಿಸುವ, ವಿಶೇಷದ ದಿನ ಪಾತ್ರೆ ತೊಳೆಯುವ ಕೆಲಸಕ್ಕೆಲ್ಲ ‘ಮಾದೇವಿನ್ನ ಲೆಕ್ಕಕ್ಕೆ ಹಿಡಿಯಲೆ ಅಡ್ಡಿಲ್ಲೆ’ ಎಂಬ ನಂಬಿಕೆ ಊರಲ್ಲಿ. ಇನ್ನು ಅವಳ ಸ್ಪೆಷಾಲಿಟಿ ಬಾಣಂತನದ ಚಾಕರಿ. ಹಿಳ್ಳೆ-ಬಾಣಂತಿ ಸ್ನಾನ, ಆರೈಕೆ, ಚಿಕ್ಕ ಪುಟ್ಟ ನಾಟಿ ಔಷಧಿ, ಗುಡ್ಡೆಗಟ್ಟಲೆ ಬಟ್ಟೆ ಒಗೆತ ಎಲ್ಲದಕ್ಕೂ ಮಾದೇವಿ ಬ್ರಾಂಡಿನ ಸೇವೆ ಸುಪ್ರಸಿದ್ಧ. ಅವಳ ಅವ್ವ, ಅಜ್ಜವ್ವನೂ ಇದೇ ಮಾಡಿದವರಂತೆ. ಅವರೆಲ್ಲರ ಅನುಭವಸಾರ ಸೇರಿ ‘ಮಾದೇವಿ ಛಾಪು’ ರೂಪುಗೊಂಡಿತ್ತು. ಊರಲ್ಲಿ ಯಾರದೇ ಮಗಳು/ಸೊಸೆ ಬಸುರಿ ಎಂದು ಗೊತ್ತಾಗುತ್ತಿದ್ದಂತೆ ಹೆಂಗಸರು ‘ಇದೊಂದು ಬಾಳಂತನ ನೀ ಮಾಡ್ಕೊಡದೆಯಾ’ ಎಂದು ರಿಸರ್ವ್ ಮಾಡಿಬಿಡುತ್ತಿದ್ದರು. ನಮ್ಮನೆಯಲ್ಲೂ ದೊಡ್ಡಪ್ಪನ ಮಕ್ಕಳಿಬ್ಬರ, ನನ್ನಕ್ಕನ ಬಾಣಂತನಕ್ಕೆ ಅವಳದ್ದೇ ಪುರೋಹಿತ್ಗೆಯಾಗಿ ಈಗ ನನ್ನ ಸರದಿ ಬಂದಿತ್ತು.
‘ಆಸ್ರಿಗ್ಯಾತ? ಮಾಣಿನ ಎಬ್ಸಿ ಹಾಲು ಕುಡಿಸಿಕ್ಯಂಡು ಬಾ ಬೇಗ’ ಅಮ್ಮ ಅವಸರಿಸಿದಳು.ತಿಂಡಿ ಮುಗಿಸಿ ಬರುವಷ್ಟರಲ್ಲಿ ಮಗರಾಯ ಎದ್ದು ರಂಪ ಶುರುಮಾಡಿದ್ದ. ‘ಎದ್ದ ಕೂಡಲೇ ಹೊಟ್ಟೆಗೆ ಬೇಕು ಮಾಣಿಗೆ, ಅಪ್ಪನ್ ಕಾಣದೇ ಹೋದ್ರೂ ಅಂವಂದೇ ಬುದ್ಧಿ’, ಹುಸಿಮುನಿಸು ತೋರುತ್ತ ಎದೆಗಂಟಿಸಿಕೊಂಡೆ. ಮಗನ ದನಿ ಅಡಗುತ್ತಿದ್ದಂತೆ ಮತ್ತೆ ಮಾದೇವಿ ದನಿಯ ಭೋರ್ಗರೆತ, ಈ ಬಾರಿ ಹೊಡತಲ ಕಡೆಯಿಂದ. ಕೊಟ್ಟಿಗೆಯಲ್ಲಿದ್ದ ದೊಡ್ಡಮ್ಮನ ಬಳಿ ಮಾತನಾಡುತ್ತಿರಬೇಕು, ‘ಯಂಥಾ ಮಾಡದ್ರಾ ಸುಶೀಲಮಾ, ಎಲ್ಲಾ ಹಣೇಬರಾ, ಇಲ್ಲಾರೆ ನಮ್ ರತ್ನಿ ಕತೆ ಹೀಂಗ್ ಆಗ್ತಿತ್ತನ್ರಾ. ಊರವ್ಕೆಲ್ಲಾ ನಾ ಬಾಳಂತನಾ ಆರೈಸ್ತ್ನಿ, ನನ್ ಮಗ್ಳಿಗೇ ಮಾಡುಕೆ ಹಣೇಲಿ ಬರೀನಲ್ಲಾ. ಅದು ಗಂಡನಮಲ್ಲಿ ಯಂಥ ತಿಂತ, ಯಂಥ ಕುಡೀತ… ಒಂದ್ ಮಾತು ನಂಗ್ಯಾರೂ ಹೇಳ್ನಲ್ಲ, ಕೇಳ್ನಲ್ಲ. ಮೊಮ್ಮ ಹುಡುಗನ್ನ ನೋಡಾಕೂ ಇನ್ನೂ ಮೂರ್ತ ಕೂಡ್ಬರ್ನಲ್ಲ ನಂಗೆ’ ಎಂದು ನಿಡುಸುಯ್ಯುತ್ತಿದ್ದಳು. ರತ್ನಳ ಕಂಗಾಲು ಕಣ್ಣುಗಳು ನೆನಪಿಗೆ ಬಂದವು. ನನಗಿಂತ ಎರಡು ವರ್ಷ ಚಿಕ್ಕವಳು, ಶಾಲೆಯಲ್ಲಿದ್ದಾಗಲಿಂದಲೂ ಪರಿಚಯ. ಓದು ಹತ್ತದೇ ಏಳನೆತ್ತಿಗೇ ಶಾಲೆ ಬಿಟ್ಟವಳು ತಾಯಿ ಜೊತೆ ದುಡಿತ ಶುರು ಮಾಡಿದ್ದಳು. ಅವಳಿಗೆ ಇಪ್ಪತ್ತು-ಇಪ್ಪತ್ತೆರಡು ವರ್ಷವಾಗಿದ್ದೇ ಮಗಳ ‘ಮದೀ’ ತಲೆಬಿಸಿ ಹಚ್ಚಿಕೊಂಡ ಮಾದೇವಿ, ‘ನಮ್ ಜನಾ ಇತ್ಲಾಗೆ ಕಮ್ಮಿ ಐದಾವೆ. ಸಾಗರ ಬದೀಗೆ, ಘಟ್ಟದ ತೆಳಗೆ ಹುಡ್ಕಕೆ ಹೋಬೇಕು, ವಟ್ಟು ನಮಗೆ ತಿರುಗ್ಯಾಟವೇ ಸೈ’ ಎನ್ನುತ್ತಿದ್ದಳು.
ಕಷ್ಟಪಟ್ಟು ಹುಡುಕಿದ ಹುಡುಗರೂ ‘ಹುಡ್ಗಿ ಕಪ್ ಅದೆ’ ಎಂದು ಬಿಟ್ಟುಬಿಡುತ್ತಿದ್ದರಂತೆ. ಖುದ್ದು ಮಾದೇವಿಯೇ ‘ಯಂಥ ಮಾಡದ್ರಾ, ನಮ್ಮನೆ ಹುಡ್ಗಿ ಹನಿ ಕಪ್ಪದೆ’ ಎಂದು ಷರಾ ಬರೆಯುತ್ತಿದ್ದಳು. ಎಲ್ಲ ಒಪ್ಪಿಗೆಯಾದ್ರೆ ವರದಕ್ಷಿಣೆ ಬಾಬ್ತು ಕೈ ಮೀರಿದ್ದಾಗಿರುತ್ತಿತ್ತು. ಅಂತೂ ಇಪ್ಪತ್ತಾರು ತುಂಬುವುದರೊಳಗೆ ಕುಮಟಾ ಕಡೆಯ ಚಂದದ ಹುಡುಗನ ಜೊತೆ ಮಗಳ ಮದುವೆಯಾದಾಗ ಮಾದೇವಿಯ ಖುಷಿ ಹೇಳತೀರದಂತೆ; ‘ಮದ್ವೆ ದಿನಾ ಮಾದೇವಿ ನೆಲ ಬಿಟ್ಟು ಮೂರಡಿ ಮ್ಯಾಲೆ ಹಾರ್ತಾ ಇತ್ತು’ ದೂರವಾಣಿಯಲ್ಲಿ ವರದಿ ಕೊಟ್ಟಿದ್ದಳು ಅಮ್ಮ. ಜೊತೆಗೇ ‘ಯಂಥೆಂಥಾ ಸುಮಾರಿನವೂ ರತ್ನ ‘ಕಪ್ಪು’ ಹೇಳಿ ಬಿಟ್ಟಿದ್ದಿದ್ದ. ಈಗ ಇಷ್ಟು ಚಂದ ಇದ್ದಂವ ವರದಕ್ಷಿಣೆ ಸೈತಾ ತಗಳ್ಳದ್ದೇ ಮದ್ವೆ ಆಜಾ ಅಂದ್ರೆ ಯಾಕೋ ಅನುಮಾನ… ಊರ ಬದೀಗೆ ಎಲ್ಲಾ ಇದೇ ಮಾತಾಡ್ಕ್ಯತ್ತಿದ್ದ’ ಎಂದೂ ಹೇಳಿದ್ದಳು.ಆರು ತಿಂಗಳ ಹಿಂದೆ ನಮ್ಮೂರ ಬಸ್ಸ್ಟ್ಯಾಂಡಿನಲ್ಲಿ ಕಂಡಿದ್ದೆ ಅವಳನ್ನ. ಒಂಬತ್ತು ತಿಂಗಳ ಬಸುರಿ ಆಕೆ ಆಗ. ಬಸವಳಿದ ಮೈ, ಬಾಡಿದ ಮುಖ… ನನ್ನ ‘ಆರಾಮನೇ…ರತ್ನಾ’ಗೆ ಪ್ರತ್ಯುತ್ತರವಾಗಿ ನಿರ್ಜೀವ ನಗು ಬೀರಿದ್ದಳಷ್ಟೇ. ‘ರತ್ನಂಗೆ ಯಂಥಾ ಆಜೆ? ಬಡಕಲು ಬೇತಾಳದಂಗೆ ಆಗೋಜು. ಹಗರ ದಬ್ಬೆಗೆ ಹೊಟ್ಟೆ ತಂದು ಕಟ್ಟಿ ಇಟ್ಟಾಂಗೆ ಕಾಣ್ತು’ ಎಂದಿದ್ದಕ್ಕೆ, ‘ಪಾಪ, ಅದರ ಕತೆ ಯಂಥ ಕೇಳ್ತೆ, ಹುಡುಕೀ ಹುಡುಕೀ ಹಾಳು ಬಾವಿಗೆ ಕೆಡಗಿದಾಂಗಾಜು’ ಎಂದಿದ್ದಳು ಅಮ್ಮ. ಊರವರ ಊಹೆ ನೂರಕ್ಕೆ ನೂರು ಸತ್ಯ ಮಾಡಿದ್ದ ಚಟಸಾರ್ವಭೌಮನಂತೆ ಆಕೆಯ ಗಂಡ ಮಾಬ್ಲ. ಕುಡಿತ, ಇಸ್ಪೀಟು, ದುಂದು, ದುಪ್ಪಾಳತನ… ಮೇಲಿಂದ ಲಂಪಟತನ. ಊರ ಬದಿ ಹೆಣ್ಣು ಸಿಗುವುದೇ ಕಷ್ಟವಾಗಿ ಘಟ್ಟದ ಮೇಲೆ ಬಂದು ಹುಡುಕುತ್ತಿದ್ದಾಗ ರತ್ನ ಸಸಾರಕ್ಕೆ ಸಿಕ್ಕಿಕೊಂಡಿದ್ದಳು.
ದುಡಿತಕ್ಕೆ ಹೆದರುವವಳಲ್ಲ ಆಕೆ- ಮದುವೆಗೆ ಮುನ್ನ ದುಪ್ಪಾಳ ಅಪ್ಪನನ್ನು ಕಂಡಿದ್ದಳು; ಈಗ ದುಪ್ಪಾಳ ಗಂಡ. ವ್ಯತ್ಯಾಸವೆಂದರೆ ಮೊದಲು ಅವ್ವನ ಅಕ್ಕರೆ ಇತ್ತು, ಈಗ ಅತ್ತೆಯ ಅಸಡ್ಡೆ ಅಷ್ಟೇ. ಹೇಗೋ ಗಂಡನ ಮನವೊಲಿಸಿ ದಾರಿಗೆ ತರುವಷ್ಟರಲ್ಲಿ ಬಸುರಿ ಆಕೆ. ಇತ್ಲಾಗೆ ಮಾದೇವಿಯ ಮಗ ಸುಬ್ರಾಯಂದು ಮದುವೆ ನಿಶ್ಚಯವಾಗಿತ್ತು. ಮದುವೆಗೆ ಬಂದ ರತ್ನ ಆರಾಮಿಲ್ಲದೇ, ಡಾಕ್ಟರ ಸಲಹೆಯಂತೆ ತವರಲ್ಲೇ ಉಳಿದಿದ್ದಳು. ಹೆಂಡತಿ ದೂರವಾಗಿದ್ದೇ ಮಾಬ್ಲ ಮತ್ತೆ ಬಾಲ ಬಿಚ್ಚಿದ್ದನಂತೆ. ಅತ್ತಿಗೆಯ ತಂಗಿ ಜೊತೆ ಸಂಬಂಧ ಬೆಳೆಸಿ ಆಕೆ ಗರ್ಭಿಣಿಯಾಗಿದ್ದರಿಂದ, ಹೆಂಡತಿಯನ್ನು ಬಿಟ್ಟು ಅವಳನ್ನೇ ಮದುವೆಯಾಗು ಎಂದು ಅಣ್ಣ-ಅತ್ತಿಗೆ ಪಟ್ಟು ಹಿಡಿದಿದ್ದರಂತೆ. ಗಂಡನ ಅವಾಂತರ ರತ್ನಳ ಜೀವಕಳೆಯನ್ನೇ ಕಳೆದಿತ್ತು. ಇದೇ ಸಂದರ್ಭದಲ್ಲಿ ನಾನು ಆಕೆಯನ್ನು ಕಂಡದ್ದು. ಅದಾಗಿ ಒಂದು ವಾರಕ್ಕೆ ನಡೆದ ಪಂಚಾಯಿತಿಯಲ್ಲಿ ಸುಬ್ರಾಯಂಗೂ, ಮಾಬ್ಲಂಗೂ, ಅವನ ಅಣ್ಣಂಗೂ ಜಟಾಪಟಿಯಾಗಿ ಪರಸ್ಪರ ಕುತ್ತಿಗೆ ಪಟ್ಟಿಗೆ ಕೈ ಹಾಕಿ ಹೊಡೆದಾಡಿದ ನಂತರ ಮಾಬ್ಲ, ‘ಜನ್ಮಿತ ಇನ್ನು ನಿಮ್ಮನೆಗೆ ಕಳಸಾಕಲ್ಲ’ ಹೇಳಿ ತಿಂಗಳು ತುಂಬಿದ ರತ್ನಳನ್ನು ವಾಪಸ್ ಕರಕೊಂಡು ಹೋದನಂತೆ. ಆಮೇಲೆ ಮಗಳು ಗಂಡು ಮಗು ಹಡೆದಿದ್ದು, ಅವಳ ಗಂಡ ಅಣ್ಣನಿಂದ ಬೇರೆಯಾಗಿದ್ದು ಎಲ್ಲಾ ಅಡಾಪಡಾ ಸುದ್ದಿಯಾಗೇ ಮಾದೇವಿಯನ್ನು ತಲುಪಿದ್ದು. ಹೋಗಿ ನೋಡಿ ಬರೋಣವೆಂದರೆ ಮನೆಯಲ್ಲಿ ಶಣ್ಯಂದು, ಸುಬ್ರಾಯಂದು ಆಣೆ, ಭಾಷೆ ಕಟ್ಟಲೆ.
ಯೋಚನೆಯನ್ನು ತುಂಡರಿಸಿದ್ದು ದೂರವಾಣಿ ಕರೆ. ಉದ್ದನೆಯ ರಿಂಗ್…. ಪ್ರದೀಪನದೇ… ಅನುಮಾನವಿಲ್ಲ. ಮಗುವನ್ನು ಎದೆಗವಚಿಕೊಂಡೇ ‘ಹಲೋ’ ಎಂದೆ. ‘ಹಾಯ್ ಹನಿ’… ಮಗಚಿಟ್ಟು ಬರುವಷ್ಟು ಸವಿ ಅವನ ದನಿಯಲ್ಲಿ. ‘ಮಗನ ಫೋಟೋ ಯಾವಾಗ ತೆಗೆಸ್ತೆ? ವೀಕೆಂಡ್ ಒಳಗೆ ಪಾಸ್ಪೋರ್ಟ್ ಡಾಕ್ಯುಮೆಂಟ್ ರೆಡಿ ಮಾಡಿಡು. ಅಪ್ಲಿಕೇಶನ್ ಸಬ್ಮಿಟ್ ಮಾಡಲೆ ಏರ್ಪಾಟು ಮಾಡ್ತಿ’ ಎಂದ. ಉತ್ತರ ಕೊಡಲು ಮನಸ್ಸಾಗಲಿಲ್ಲ. ‘ಯೋಚ್ನೆ ಮಾಡ್ತಿ’ ಎಂದು ಫೋನಿಟ್ಟೆ. ನಿನ್ನೆ ರಾತ್ರಿ ಇದೇ ವಿಷಯಕ್ಕಲ್ಲವೇ ಒಂದು ತಾಸು ಫೋನಿನಲ್ಲೇ ತಿಕ್ಕಾಟ ನಡೆಸಿದ್ದು. ನಾನು ಗರ್ಭಿಣಿಯಾಗುತ್ತಲೇ ಹೆರಿಗೆ ರಜೆಯ ಪ್ಲಾನಿಂಗ್ ಶುರು ಮಾಡಿದ್ದರೆ ಇಂವ ವಿದೇಶ ಪ್ರಯಾಣಕ್ಕೆ ಸ್ಕೆಚ್ ಹಾಕಿದ್ದ. ‘ಎಲ್ಲಾ ನಮ್ಮ ಒಳ್ಳೇದಕ್ಕೆ. ನೀನು ಬಾಣಂತನ ಹೇಳಿ ನಾಲ್ಕು ತಿಂಗಳು ಊರಿಗೆ ಹೋಗಿ ಕುಂತ್ರೆ ಇಲ್ಲಿ ನಾನೊಬ್ನೇ ಆಗ್ತಿ. ಅದರ ಬದ್ಲು ‘ಆನ್ ಸೈಟ್’ ಹೋದ್ರೆ ಸಖತ್ ದುಡ್ಡು ಮಾಡಲಾಗ್ತು. ನೀ ವಾಪಸ್ ಬರಹೊತ್ತಿಗೆ ನಾನೂ ವಾಪಸ್ಸಾಗ್ತಿ’, ಬೆಣ್ಣೆ ಹಚ್ಚಿದ್ದ. ‘ನಾನು ಬೇನೆ ತಿಂದು ನರಳ್ತಾ ಇದ್ರೆ ನೀನು ಫಾರಿನ್ ಮಜಾ ಮಾಡ್ತ್ಯ, ಹುಟ್ಟಿದ ಮಗುವನ್ನ ಎತ್ತಿಗ್ಯತ್ತ್ತಿಲ್ಯ, ಹೆಸರಿಡಲೆ ಅಪ್ಪನೇ ಬರವು ಗೊತ್ತಿದ್ದ’ ದಬಾಯಿಸಿದ್ದೆ. ‘ನಿನ್ನ ನೋವು ನಾ ಹಂಚಿಕೊಳ್ಳಲಾಗ್ತ ಹೇಳು, ಶಿಶುಗಂತೂ ಯಾರು ಎತ್ತಿಕ್ಯಂಡ್ರೂ ಒಂದೇ, ಏನೂ ತಿಳಿತಿಲ್ಲೆ. ದುಡಕಂಡು ಬಂದ್ರೆ ನೀನು ಇಷ್ಟಪಟ್ಟಂಥ ಮನೆ ಆಗ್ತು ಬೆಂಗಳೂರಲ್ಲಿ’ ವಾದ ಮಾಡಿದ್ದ. ತನ್ನ ಮಹತ್ವಾಕಾಂಕ್ಷೆಗೇ ಅಂಟಿಕೊಂಡು ವಿದೇಶಕ್ಕೆ ಹೋದವನಿಗೆ ಈಗಿನ್ನೊಂದು ಆಸೆ. ‘ನೀನೂ ಇಲ್ಲಿ ಬಂದ್ಬಿಡು. ಒಂದು ವರ್ಷ ಝುಮ್ಮಂತ ಇದ್ದು ಹೋಪನ’ ಎನ್ನುತ್ತಿದ್ದಾನೆ. ಕೆಲಸ ಬಿಡಬೇಕಾಗುತ್ತಲ್ಲ ಎಂದು ನಾನು ಚಿಂತಿಸಿದರೆ ‘ಚೊಲೋನೆ ಆತು, ಜಾಸ್ತಿ ಹೊತ್ತು ಜೊತೆಗೆ ಇರಲಾಗ್ತು’ ಎನ್ನುತ್ತಾನವ. ಅಪ್ಪ ಅಮ್ಮನೂ ಅವನಿಗೆ ಬೆಂಬಲವಾಗಿ ‘ಸಣ್ಣ ಶಿಶು ಇಟ್ಗಂಡು ಕೆಲಸ ಕಷ್ಟನೇ. ಆರಾಮಾಗಿ ಮನೆಲ್ಲಿದ್ದು ಮಗನ್ನ ನೋಡ್ಕ್ಯ. ಎಲ್ಲರಿಗೂ ಒಳ್ಳೇದು’ ಎಂದು ತುಂಬಕ್ಕಿ ತಟ್ಟುತ್ತಿದ್ದಾರೆ. ನನ್ನ ಅಭಿಲಾಷೆಗೆ ಬೆಲೆ ಇಲ್ಲವೇ? ತಲೆ ಹನ್ನೆರಡಾಣೆಯಾಗುತ್ತಿದೆ.
ಮಾಣಿಗೆ ಎಣ್ಣೆ ತೀಡಿದ ಅಮ್ಮ ಸ್ನಾನಕ್ಕೆ ಕರೆದುಕೊಂಡು ಹೋದರೂ ಅನ್ಯಮನಸ್ಕಳಾಗಿ ಕುಂತೇ ಇದ್ದೆ. ನೀರಿನ ಬಿಸಿ ತಡೆಯಲಾರದೇ ಅಂವ ಒಂದೇ ಸಮ ಅತ್ತಿದ್ದು, ಕೆಂಪಗಾಗಿ ಉಗಿ ಹಾಯುತ್ತಿರುವ ಮೊಮ್ಮಗನನ್ನು ಎತ್ತಿಕೊಂಡು ಬಂದ ಅಮ್ಮ ‘ಬಾಳೆಯ ಬನ ಚಂದ, ತಾಳೆಯ ಹೂ ಚಂದ, ಯಮ್ಮನೆ ತಮ್ಮಯ್ಯನ ಅಳು ಚಂದ…. ಒಳೊಳಳೆಯ್…’ಎನ್ನುತ್ತ ಪೌಡರ್ ಮೆತ್ತಿ ಪಂಜಿ ಸುತ್ತಿದ್ದು ಮರಗಟ್ಟಿದ್ದ ನನ್ನ ಮನಕ್ಕೆ ತಾಗಲೇ ಇಲ್ಲ. ‘ಯಂಥಾ ತಲೆ ಕೆಡಿಸಿಕ್ಯತ್ತೆ ತಂಗಿ, ಹಣೇ ಬರದಲ್ಲಿ ಇದ್ದಂಗಾಗ್ತು. ಗಂಡ-ಸಂಸಾರಕ್ಕಿಂತ ನಿನ್ನ ಕೆಲಸ ಹೆಚ್ಚಲ್ಲ. ತಗ, ಮಾಣಿನ್ ಮಲಗಿಸಿ ಬಾ. ಮೀಯಲಕ್ಕು’ ಸಸಾರಕ್ಕೆ ಹೇಳಿದ ಅಮ್ಮ ಮಗನನ್ನು ಕೈಗಿತ್ತು ಅಡುಗೆ ಮನೆಯತ್ತ ನಡೆದಳು. ಇನ್ನು ನನಗೆ ಕಷಾಯ, ಪಥ್ಯದ ಪದಾರ್ಥ, ಮಧ್ಯಾಹ್ನದ ಅಡಿಗೆ… ಎನ್ನುತ್ತ ಮನೆಕೆಲಸದಲ್ಲಿ ಮುಳುಗಿಹೋಗುವ ಅಮ್ಮನಿಗೆ ನನ್ನ ವಾದ ‘ಹಠ’ವಾಗಿ ಕಂಡರೆ ಆಶ್ಚರ್ಯವೇನಿಲ್ಲ.ಮಗ ಮಲಗುತ್ತಿದ್ದಂತೆ ನನ್ನ ಸ್ನಾನ ‘ಸಂಘರ್ಷ’ ಶುರು! ಹಂಡೆಗಟ್ಟಲೆ ಕುದಿ ನೀರನ್ನು ಮಾದೇವಿ ಧಸಭಸ ಮೈ ಮೇಲೆ ಹೊಯ್ಯುತ್ತಿದ್ದರೆ ದಿನಾ ಕೂಗಿಕೊಳ್ಳುತ್ತಿದ್ದೆ. ಇವತ್ತು ಆ ನೀರಿಗಿಂತ ಜಾಸ್ತಿ ಬಿಸಿ ಮನಸ್ಸಿನಲ್ಲಿ ತುಂಬಿಕೊಂಡಿದ್ದರಿಂದ ತಾಪವೂ ತಿಳಿಯಲಿಲ್ಲ, ಚರ್ಮ ಕೆಂಪಾಗಿ ಉರಿಯುತ್ತಿದ್ದುದೂ ಅರಿವಾಗಲಿಲ್ಲ. ಸ್ನಾನದ ನಂತರ ‘ಬೆವರಿಳಿಸಿಕೊಳ್ಳುವ’ ರಾಮಾಯಣ! ‘ಬಾಳಂತಿ ಮೈ ಚೊಲೋ ಬೆಗರಬಕು. ಬಾಳಂತನದಾಗೆ ಬೆಗರಿಸಿಕಳ್ನಲ್ಲ ಅಂದ್ರೆ ಕಡಿಗೆ ಸಾಯತಂಕ ಕಸಾಲೆ ತಪ್ಪಕಲ್ಲ’ ಎಂಬುದು ಕಳೆದ ಒಂದೂವರೆ ತಿಂಗಳಿಂದ ಮಾದೇವಿಯ ಪ್ರತಿದಿನದ ಬೋಧನೆ. ಹೊಡತಲ ಬೆಂಕಿಯೆದುರು ಕಂಬಳಿ ಮುಚ್ಚಿಕೊಂಡು ದುಂಡಗೆ ಮಲಗುವುದೆಂದರೆ ನನಗೆ ಎಲ್ಲಿಲ್ಲದ ಮುಜುಗರ, ಕಿರಿಕಿರಿ. ಇವೆಲ್ಲ ಅರ್ಥವಿಲ್ಲದ ಆಚರಣೆಗಳೆಂದು ದಿನಾ ತಕರಾರು ತೆಗೆಯುತ್ತಿದ್ದೆ. ಇವತ್ತು ಯಾವುದಕ್ಕೂ ಮನಸ್ಸಾಗದೇ ಸೀದಾ ಹೋಗಿ ಕಂಬಳಿ ಮೇಲೆ ಬಿದ್ದುಕೊಂಡೆ. ಹಿಂದೆಯೇ ಬಂದ ಮಾದೇವಿ ಮೇಲಿಂದೆರಡು ಕಂಬಳಿ ಮುಚ್ಚಿ ಬೆಂಕಿ ಹೆಚ್ಚಿಸಿದಳು. ಧಗೆಗೆ ಸ್ವೇದಗ್ರಂಥಿಗಳೆಲ್ಲ ಬಾಯ್ತೆರೆದು ಗುಳುಗುಳು ಉಗುಳತೊಡಗಿ ರೇಜಿಗೆಗಿಟ್ಟುಕೊಳ್ಳುವ ಹೊತ್ತಿಗೆ ಸರಿಯಾಗಿ ‘ಟಕ ಟಕ’ ಸದ್ದು ಹತ್ತಿರವಾಯ್ತು.
ಅಮ್ಮಮ್ಮ ಕೋಲೂರುತ್ತ ಬಂದಿರಬೇಕು, ಬೆಂಕಿ ಕಾಸಲು. ‘ಘನಾಕೆ ಬೆಂಕಿ ಕತ್ಸು ಮಾದೇವಿ. ಗಳಗಳ ಬೆವರಿಳಿಬೇಕು ನೋಡು’- ಪಕ್ಕದಲ್ಲಿ ಕುಳಿತುಕೊಂಡು ಕಂಬಳಿ ಮೇಲಿಂದಲೇ ನನ್ನ ಮೈ ತಡವಿದ ಅಮ್ಮಮ್ಮ, ‘ಬೆಂಗಳೂರಲ್ಲಿ ಚೊಲೋ ಕೆಲಸದಲ್ಲದೆ ನಮ್ಮನೆ ಮೊಮ್ಮಗಳು. ಹಡೆದ ಮೈ ಗಟ್ಟಿ ಆದ್ರೆ ನಾಳೆ ಕೆಲಸಕ್ಕೋಪದು ಸಸಾರ. ಸರೀ ಆರೈಸು ಅದ್ರನ್ನ’ ಎಂದಳು. ಅಕ್ಕರೆಯ ದನಿಗೆ ಆ ಧಗೆಯಲ್ಲೂ ತಂಗಾಳಿ ಬೀಸಿದಂತಾಯ್ತು.’ನಿನ್ನ ಮಗಳ ಪಂಚಾಯ್ತಿ ಮುಗಿತಿದ್ದಂಗೆ ಮಗಂದು ಶುರುವಾಗದೆ ಹೇಳಿ ಅಡಾಪಡಾ ಕೇಳ್ದೆ. ಯಂಥೇ ಅದು?’ ಸೊಂಟ ಕಾಸುತ್ತ ಅಮ್ಮಮ್ಮ ಕೆದಕಿದಳು.’ಥೋ, ಅಂವನ ಸುದ್ದಿ ಯಂಥ ಕೇಳ್ತ್ರಿ ಗೌರಮಾ. ಆವಾಗ ಮನ್ಯಾಗೆ ಇನ್ನೊಂದು ತಂಗಿ ಅದೆ, ಅದ್ರ ಮದೀ ಮಾಡು ಮದ್ಲು ಅಂದ್ರೂ ಕೇಳ್ದೇ ತಾನು ಮದೀಯಾದ. ಹುಡ್ಗಿ ಹೀಂಗದೆ ಹೇಳಿ ನಮಗ್ಯೆಂತಾ ಗೊತ್ತಿತ್ತನ್ರಾ’ ಅಳಲು ತೋಡಿಕೊಂಡಳು ಮಾದೇವಿ.’ಗಂಡುಹುಡ್ಗ’ ಸುಬ್ರಾಯನ್ನ ಮುದ್ದಿನಿಂದ ಸಾಕಿದ್ದಳು ಮಾದೇವಿ. ನನ್ನ ಕ್ಲಾಸಿನಲ್ಲಿ ಇದ್ದವ ಎಂಟನೆತ್ತಿಗೆ ಢುಮ್ಕಿ ಹೊಡ್ದು ಊರಲ್ಲೇ ಓಡಾಡಿಕೊಂಡಿದ್ದ. ಹೇಳಿದವರ ಮನೆಗೆ ನೆಟ್ಟಗೆ ಕೆಲಸಕ್ಕೆ ಹೋಗುತ್ತಿಲ್ಲ, ಗುಟ್ಕಾ ಜಗಿಯುತ್ತಾನೆ ಎಂದು ತಾಯಿ ಒಮ್ಮೆ ಜೋರು ಬಯ್ದಿದ್ದಕ್ಕೆ ಸಿಟ್ಟಾಗಿ ಕಿವಿಯೋಲೆ ಕದ್ದು ಓಡಿ ಹೋದವ ವರ್ಷದ ಮೇಲೆ ಖಾಲಿ ಕೈಯಲ್ಲಿ ವಾಪಸ್ಸಾಗಿದ್ದ.
ಹೊಸದಾಗಿ ಕಲಿತ ವಿದ್ಯೆಯೆಂದರೆ ಸಿನೆಮಾ ಷೋಕಿ, ಕುಡಿತ. ಆದರೂ ಮತ್ತೆಲ್ಲಿ ಓಡಿ ಹೋದಾನೋ ಎಂದು ಮಾದೇವಿ ತಣ್ಣಗೆ ಉಳಿದಿದ್ದಳು. ಸೊಸೈಟಿಯ ರಾತ್ರಿ ಕಾವಲುಗಾರನಾಗಿ ಸೇರಿಕೊಂಡರೂ ಸಂಪಾದನೆಯೆಲ್ಲ ಷೋಕಿಗೇ ಆಗುತ್ತಿತ್ತು. ಇದ್ದಿದ್ದರಲ್ಲಿ ದಡ ಹತ್ತಿದವಳೆಂದರೆ ಕಿರಿ ಮಗಳು ಸವಿತಾ. ಹತ್ತನೆತ್ತಿ ಮುಗಿಸಿ ಡೇರಿಯಲ್ಲಿ ಕ್ಯಾನು ತೊಳೆಯುವ, ಗುಡಿಸಿ ಒರೆಸುವ ಕೆಲಸಕ್ಕೆ ಸೇರಿ ಒಂಚೂರು ಸಂಪಾದಿಸುತ್ತಿದ್ದಳು.ಇಂತಿಪ್ಪ ಸುಬ್ರಾಯ ಏಕಾಏಕಿ ಒಂದಿನ ತನಗೊಂದು ಹುಡುಗಿ ಗೊತ್ತು ಮಾಡಿಕೊಂಡು ಬಂದ. ಕಿರಿ ತಂಗಿಯದಾಗಲಿ ತಡಿ ಎಂಬ ಹಿತವಚನಕ್ಕೆ ತಲೆ ಬಾಗದ್ದರಿಂದ ಮಾದೇವಿ-ಶಣ್ಯ ಮದುವೆಗೆ ಹೂಂಗುಟ್ಟಿದರು. ಸಂಭ್ರಮ ಇಳಿದ ಮೇಲೆ ಸೊಸೆಯೇ ಹೇಳಿದಳಂತೆ ತಾನು ಮದುವೆಗೆ ಮೊದಲೇ ಬಸುರಾಗಿ ಹೆತ್ತವಳು… ಮದುವೆ ದಿನ ‘ನಂಟರ ಹುಡ್ಗ’ ಎಂದು ಓಡಾಡಿಕೊಂಡಿದ್ದ ಪೋರ ತನ್ನ ಮಗ ಎಂದು. ಶುರುವಾಯಿತು ಸುಬ್ರಾಯನ ಪೌರುಷ ಪ್ರತಾಪ- ಹೊಡೆತ, ಬಡಿತ ಎಲ್ಲ. ಅವನ ಹೆಂಡತಿ ‘ತನ್ನದೇ ತಪ್ಪು’ ಎಂದು ತಿಂಗಳುಗಟ್ಟಲೇ ಸಹಿಸಿಕೊಂಡು ಇದ್ದಳಂತೆ. ಆದರೆ ಗ್ರಾಮದ ‘ಸ್ತ್ರೀ ಶಕ್ತಿ’ ಸಂಘದವರು ತಡೆಯಲಿಕ್ಕಾಗದೇ ಪೊಲೀಸ್ ಕಂಪ್ಲೇಂಟ್ ಕೊಟ್ಟು, ಪೋಲಿಸರು ಬಂದು ಸುಬ್ರಾಯನಿಗೆ ನಾಕು ತದುಕಿದ್ದಲ್ಲದೇ, ಕುಟುಂಬದ ಎಲ್ಲರೂ ಠಾಣೆಗೆ ಬಂದು ‘ಇನ್ನು ಹೀಂಗೆ ಮಾಡೋದಿಲ್ಲ’ ಎಂದು ಮುಚ್ಚಳಿಕೆ ಬರೆದುಕೊಡಬೇಕೆಂದು ತಾಕೀತು ಮಾಡಿದ್ದರಂತೆ. ಅದೇ ಸುದ್ದಿ ಅಮ್ಮಮ್ಮನಿಗೆ ವಿವರಿಸಿದ ಮಾದೇವಿ ‘ನಾಳೀಕೆ ಬ್ಯಳಿಗ್ಗೆ ಠಾಣೆಗೆ ಬರೂಕೆ ಹೇಳಿ ಹೋಗ್ಯಾವೆ’ ಎಂದಳು.
ಬೆವರೊರೆಸಿಕೊಂಡವಳು ಬಟ್ಟೆ ತೊಟ್ಟು ಬಂದು ಹಾಸಿಗೆ ಮೇಲೆ ಬಿದ್ದುಕೊಂಡೆ. ಜಗುಲಿಯಲ್ಲಿ ಅಮ್ಮ ಮಾದೇವಿಗೆ ಕವಳ ಕೊಡುತ್ತಿದ್ದವಳು, ‘ಹಂಗಾರೆ ನಾಳೆ ಮೀಸಲೆ ಬರುದಿಲ್ಲ ನೀನು, ಠಾಣೆ ಕಾಂಬಲೆ ಹೋಪವಳಿದ್ದೀಯೆ’ ಎಂದಳು.’ಅದಕ್ಕೆಂಥು? ಎಂಟು ಗಂಟಿಗೇ ಬತ್ನಿ. ಒಂಬತ್ತೂವರೆ ಬಸ್ಸಿಗೆ ಹೋದ್ರೂ ಆತದೆ ನಂಗೆ. ಠಾಣೆ ನೋಡದು ನನ್ ಹಣೆಬರದಾಗೆ ಇದ್ರೆ ಅಳ್ಚಕಾಗ್ತದ್ಯ’ ಕವಳ ಬಾಯಿಗೆ ಗಿಡಿಯುತ್ತ ಮಾದೇವಿ ಹೊರಟಳು.ಕೇಳುತ್ತಿದ್ದ ನನಗೆ ಬೆಳಿಗ್ಗೆ ಎಂಟು ಗಂಟೆಯೊಳಗೆ ಏಳಬೇಕಲ್ಲ ಎಂಬ ಚಿಂತೆ ಜೊತೆಗೆ ‘ಹಣೆಬರಾ ಅಳ್ಚಕಾಗ್ತದ್ಯ’ ಎಂಬ ಜಿಜ್ಞಾಸೆಯೂ ಮೂಡಿ ಸಿಕ್ಕಾಪಟ್ಟೆ ಸುಸ್ತೆನಿಸತೊಡಗಿತು. ‘ಸ್ಟ್ರೆಸ್ ಮ್ಯಾನೇಜ್ಮೆಂಟ’ನ್ನು ಮಾದೇವಿಯಿಂದಲೇ ಕಲಿತರೊಳ್ಳೆಯದೇನೋ.

('ಅವಧಿ.ಕಾಮ್'ನಲ್ಲಿ ಫೆಬ್ರವರಿ ೧೧, ೨೦೧೪ರಂದು ಪ್ರಕಟವಾದ ಲೇಖನ)

ಮಂಗಳವಾರ, ಜನವರಿ 14, 2014

ಏನಿಲ್ಲ... ಏನಿಲ್ಲ... ನನ್ನ ನಿನ್ನ ನಡುವೆ ವೆನಿಲ್ಲಾ...

ಒಂದು ಹತ್ತು ವರ್ಷಗಳ ಹಿಂದಿನ ಮಾತು. ನಮ್ಮ ಮಲೆನಾಡಿನಲ್ಲೆಲ್ಲ ವೆನಿಲ್ಲಾ ಮಾಯೆ ಅಮರಿಕೊಂಡಿದ್ದ ಹೊತ್ತು! ಕೆಜಿ ತೂಕದ ವೆನಿಲ್ಲಾ ಕ್ವಿಂಟಲ್ ಅಡಿಕೆಗಿಂತ ಜಾಸ್ತಿ ತೂಗುತ್ತಿದ್ದ ಕಾಲ. "ಇಂಥವರ ಮನೆಯಲ್ಲಿ ಇಂತಿಷ್ಟು ಕ್ವಿಂಟಲ್ ಅಡಿಕೆ ಆಗ್ತಡ" ಎಂಬ ಮಾತಿಗಿಂತ "ಇಂಥವರ ಮನೆಯಲ್ಲಿ ಇಷ್ಟು ಕೆಜಿ ವೆನಿಲ್ಲಾ ಆಗ್ತಡ" ಎಂಬುದಕ್ಕೆ ಹೆಚ್ಚು ತೂಕ ಇತ್ತು.
ಈ ವೆನಿಲ್ಲಾ ಹೆಂಗೆಂಗೋ ಇದ್ದವರನ್ನೆಲ್ಲ ಏನೇನೋ ಮಾಡಿಸಿತು. ತುಂಡು ಭೂಮಿ ಇಟ್ಟುಕೊಂಡು 'ಉಂಡರೆ ಉಡಲಿಲ್ಲ, ಉಟ್ಟರೆ ಉಣ್ಣಲಿಲ್ಲ' ಎಂದು ಬದುಕುತ್ತಿದ್ದವರೆಲ್ಲ ವೆನಿಲ್ಲಾ ದೇವಿಯ ಕೃಪೆಯಿಂದ ರಾಜರಾಗಿಹೋದರು. ವೆನಿಲ್ಲಾ ಸೋಡಿಗೆಯಂತೂ (ಬೀನ್, ಕೋಡು) ಸೈ, ಅದರ ಬುಡದ ದಂಟು ಕೂಡ ಮಂತ್ರ ದಂಡವಾಗಿ ಝಣ ಝಣ ಹಣ ಉದುರಿಸುತ್ತಿದ್ದ ಕಾಲ ಅದು. ಹೊಸದಾಗಿ ಬೆಳೆ ಬೆಳೆಯುವವರಿಗೆ ಕೂಳೆ ಮಾರಿಕೊಂಡೇ ಎಷ್ಟೋ ಜನ ಚೆನ್ನಾಗಿ ದುಡ್ಡು ಮಾಡಿದರು. ಅಂಗಳ-ಹಿತ್ತಲುಗಳಲ್ಲಿ, ಬೆಟ್ಟ, ಧರೆಗಳ ಮೇಲೆ... ಎಲ್ಲೆಲ್ಲೂ ಗಿಡದ ಗೂಟ, ಕಲ್ಲು ಕಂಬ ಎದ್ದು, ವೆನಿಲ್ಲಾ ಬಳ್ಳಿಯನ್ನು ಹೊದ್ದವು. ಹಿಂದೆ ಕಾಳುಮೆಣಸಿನ ಬಳ್ಳಿ ಸುತ್ತಿದ್ದ ಅಡಿಕೆ ಮರಗಳಿಗೆಲ್ಲ ಹೊಸದಾಗಿ ವೆನಿಲ್ಲಾ ಬಳ್ಳಿಯಪ್ಪುಗೆ.
ಮಧ್ಯ ಅಮೇರಿಕಾ ದೇಶಗಳಲ್ಲಿ, ಮೂಲತಃ ಇಂದಿನ ಮೆಕ್ಸಿಕೋದಲ್ಲಿ ಮೊದಲು ಬಳಕೆಯಾದ ವೆನಿಲ್ಲಾ ಒಂದು ತರಹದ ಸೀತಾಳೆ (ಆರ್ಕಿಡ್) ಸಸ್ಯ. ಇದರ ಸೋಡಿಗೆ ಆಹಾರದಲ್ಲಿ ಬಳಕೆಯಾಗುವ ಪರಿಮಳದ ಮೂಲ. ಇದು ಸೋಡಿಗೆ ಎಂದು ಕರೆಸಿಕೊಂಡರೂ ವಾಸ್ತವದಲ್ಲಿ ದ್ವಿದಳ ಸಸ್ಯಗಳ ಸೋಡಿಗೆಗಿಂತ ಭಿನ್ನ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಡೋನೇಶಿಯಾ, ಮಡಗಾಸ್ಕರ್, ಚೀನಾ, ಮೆಕ್ಸಿಕೋ ಅತಿ ಹೆಚ್ಚು ವೆನಿಲ್ಲಾ ಉತ್ಪಾದಿಸುವ, ರಫ್ತು ಮಾಡುವ ದೇಶಗಳು. ಭಾರತದಲ್ಲಿ ಮೊದಮೊದಲು ಕೇರಳ, ದಕ್ಷಿಣ ಕನ್ನಡದ ಕೆಲ ಭಾಗಗಳಲ್ಲಿ, ತೀರ್ಥಹಳ್ಳಿಯ ಪುರುಷೋತ್ತಮ ರಾಮ್ ಅವರಂಥದ ಪ್ರಗತಿಪರ ಕೃಷಿಕರ ತೋಟದಲ್ಲಿ ಬೆಳೆಯುತ್ತಿದ್ದ ವೆನಿಲ್ಲಾ ೧೯೯೫ರ ಇಸ್ವಿಯ ಆಸುಪಾಸು ಬೆಲೆ ಮುಗಿಲು ಮುಟ್ಟುತ್ತಿದ್ದಂತೆಯೇ ಪಶ್ಚಿಮ ಘಟ್ಟ ಪ್ರದೇಶಗಳ ತೋಟದೊಳಗೆಲ್ಲಾ ಪ್ರವೇಶ ಮಾಡಿತು, ನಮ್ಮ ಉತ್ತರ ಕನ್ನಡಕ್ಕೂ ಬಂತು.
ನೆಟ್ಟ ದುಡ್ಡಿನ ಬಳ್ಳಿ ಬೇರೂರುತ್ತಿದ್ದಂತೆಯೇ ಜನರ ದಿನಚರಿಯೂ ಬದಲಾಯಿತು. ಬೆಳ್ಳಂಬೆಳಿಗ್ಗೆ ಮೊದಲು ಆಸ್ರಿಗೆ ಕುಡಿದು, ಕೈಯಲ್ಲಿ ಒಂದು ಕತ್ತಿ ಹಿಡಿದು ಅಡಿಕೆ ತೋಟಕ್ಕೆ ತೆರಳುತ್ತಿದ್ದ ತೋಟಿಗರೆಲ್ಲ ಎಲ್ಲಾ ಕೆಲಸ ಬಿಟ್ಟು, 'ಥೋ, ಸೂರ್ಯನ ಬೆಳಕು ಬೀಳದ್ರೊಳಗೆ ಪಾಲಿನೇಷನ್ ಮಾಡವು' ಎನ್ನುತ್ತ ವೆನಿಲ್ಲಾ ಚಪ್ಪರಗಳಿಗೆ ದೌಡಾಯಿಸತೊಡಗಿದರು. (ಇದಕ್ಕೆ ಕೃತಕ ಪರಾಗ ಸ್ಪರ್ಷ ಬೇಕು). ಮುರುಗಲು, ಉಪ್ಪಾಗೆ ಸಿಪ್ಪೆಗಳನ್ನು ಹೊಡತಲ (ಅಗ್ಗಿಷ್ಟಿಕೆ) ಹೊಗೆಯಲ್ಲಿ, ಕಾಳುಮೆಣಸು, ಏಲಕ್ಕಿಗಳನ್ನು ಬಿಸಿಲಿನಲ್ಲೋ ಕೆಂಡದ ಕಾವಿನಲ್ಲೋ ಒಣಗಿಸುತ್ತಿದ್ದ ಜನ ವೆನಿಲ್ಲಾಗಾಗಿ ವಿಶೇಷ ಡ್ರೈಯರ್ ಕಟ್ಟಿದರು. ಮಾಮೂಲಿಯಾಗಿ ಏಲಕ್ಕಿ, ವಿಶೇಷ ಸಂದರ್ಭದಲ್ಲಿ ಕೇಸರಿಯ ದೋಸ್ತಿ ಮಾಣುತ್ತಿದ್ದ ಪಾಯಸ, ಲಾಡು, ಪೇಡೆಗಳು ಬದಲಾದ ಕಾಲಕ್ಕೆ ತಕ್ಕಂತೆ 'ವೆನಿಲ್ಲಾ' ಎಂಬ ಕಪ್ಪು ಸುಂದರಿಯ ಸಖ್ಯ ಶುರು ಮಾಡಿಕೊಂಡವು.
ಮಾತುಕತೆಗೆ ಕುಂತಾಗ 'ಯಮ್ಮಲ್ಲಿ ಇಂತಿಷ್ಟು ಕೆಜಿ ವೆನಿಲ್ಲಾ ಆಗ್ತು' ಎಂಬ ಹೆಗ್ಗಳಿಗೆಯ ಹೇಳಿಕೆಗಳು, 'ಅವರ್ ಮನೆಲ್ಲಿ ಈ ಸಲ ಭಾರಿ ವೆನಿಲ್ಲಾ ಆಜಪ್ಪಾ' ಎಂಬ ಅರೆ ಅಸೂಯೆಯ, ಚೂರು ಮೆಚ್ಚುಗೆಯ ಮಾತುಗಳು ಕುಶಲೋಪರಿ ವಿಚಾರಣೆಯಷ್ಟೇ ಸಾಮಾನ್ಯವಾದವು. ಕೆಲವೆಡೆ ಒಟ್ಟು ಕುಟುಂಬದಲ್ಲಿ ಮನೆಯ ಮೂಲ ಧನ-ಜಾಗ-ಗೊಬ್ಬರ, ಮನೆಯದೇ ಲೆಕ್ಕದಲ್ಲಿ ಆಳು ಪಡೆದ ಜನ, 'ವೆನಿಲ್ಲಾ ಉತ್ಪನ್ನ ಯನ್ನದು!' ಎಂದು ಹೇಳಿ ಪ್ರತ್ಯೇಕ ಖಾತೆಯಲ್ಲಿ ದುಡ್ಡು ಜಮಾಯಿಸತೊಡಗಿದರು. ಮೊದಲೆಲ್ಲ ಮನೆಯ ಎಲ್ಲ ಸದಸ್ಯರಿಗೆ ಒಟ್ಟಾಗಿ ಆಭರಣ ಮಾಡಿಸುತ್ತಿದ್ದ ಕೂಡು ಕುಟುಂಬಗಳಲ್ಲಿ ಈಗ ಇದ್ದಕ್ಕಿದ್ದಂತೆ ಕೆಲವರ ಮೈಮೇಲೆ 'ವೆನಿಲ್ಲಾ ಚಿನ್ನ' ಅರಳಿ ಅಸಹನೆಯ ನಾತ ನಾರಲಾರಂಭಿಸಿತು.
ಎಷ್ಟೋ ಕಡೆ ಮನೆಗೆ ಬರುವ ನೆಂಟರೆಲ್ಲ 'ನಿಮ್ಮನೆ ವೆನಿಲ್ಲಾ ಪ್ಲಾಟ್ ಭಾರಿ ಇದ್ದಡಾ, ನೋಡಕಾತು' ಎಂದು ಕೋರುವುದು, ಆತಿಥೇಯರು ಮನೆ ತೋರಿಸಿದಷ್ಟೇ ಸಲೀಸಾಗಿ 'ಬನ್ನಿ, ಯಮ್ಮನೆ ವೆನಿಲ್ಲಾ ನೋಡಲಕ್ಕು' ಎಂದು ಆಹ್ವಾನಿಸುವುದು ಅತಿಥಿ ಸತ್ಕಾರದ ಭಾಗವಾದವು. ಹಲವೆಡೆ ಹಳೆ ಕಾಲದಿಂದ ಬಂದು ಹೋಗಿ ಮಾಡುತ್ತಿದ್ದ ವಿಶ್ವಾಸದ ಜನರೂ ಎಲ್ಲೋ ಕ್ಷಣಿಕ ಆಸೆಗೆ ಬಿದ್ದು ಗುರ್ತದವರ ಮನೆಯಲ್ಲಿ ಐದೋ, ಆರೋ ಸೋಡಿಗೆ ಕದಿಯಲು ಹೋಗಿ 'ಅಡಿಕೆಗೆ ಹೋಗದ ಮಾನವನ್ನು ವೆನಿಲ್ಲಾದಲ್ಲಿ ಕಳಕೊಂಡರು'. ಇಂಥ ಪ್ರಕರಣಗಳು ಪದೇ ಪದೇ ವರದಿ ಆಗತೊಡಗಿದಂತೆ ಶಿರಸಿ, ಸಿದ್ದಾಪುರಗಳಂಥ ಪೇಟೆಗಳ ಜನರ ಗಮನವೂ ಇತ್ತ ತಿರುಗಿ, ಎಷ್ಟೋ ಮಂದಿ ತಂತಮ್ಮ ಪೇಟೆ ಮನೆಯ ತಾರಸಿ ಮೇಲೆ ವೆನಿಲ್ಲಾ ಚಪ್ಪರ ಬೆಳೆಸಿ ದುಡ್ದು ಕೊಯಿಲು ಮಾಡಿದರು. ಇನ್ನು ಕೆಲವು ಪುಂಡರು ಸಮೀಪದ ಹಳ್ಳಿಗಳಿಗೆ ಸದ್ದಿಲ್ಲದೇ ಹೋಗಿ, ವೆನಿಲ್ಲಾ ಕದ್ದು ಬರುವ ಪರಿಪಾಟ ಮಾಡಿಕೊಂಡರು, ಸಿಕ್ಕಿಬಿದ್ದು ಹೊಡೆತ ತಿಂದರು.
ಮಜವೆಂದರೆ ನಾನು ಗಮನಿಸಿದ ಪ್ರಕಾರ ನನ್ನ ಮದುವೆಯಲ್ಲಿ ದಿಬ್ಬಣದವರು ಮದುಮಗಳಿಗಿಂತ ಹೆಚ್ಚು ಆಸಕ್ತಿಯಿಂದ ನೋಡಿದ್ದು ನಮ್ಮನೆಯಲ್ಲಿ ಬೆಳೆದ ವೆನಿಲ್ಲಾ ಬಳ್ಳಿಗಳನ್ನು! ಕರಿ (ಮದುವೆ) 'ಕೂಸಿ'ಗಿಂತ ಕರಿ ಸೋಡಿಗೆಯ ನೋಟವೇ ಸೊಗಸು ಎಂಬ ತೀರ್ಮಾನಕ್ಕೆ ಬಂದಿದ್ದರೋ ಅಥವಾ ಮದುವೆ ಚಪ್ಪರದ ಸ್ವೇದ ಗಂಧಕ್ಕಿಂತ, ಸೀತಾಳೆ (ವೆನಿಲ್ಲಾ) ಚಪ್ಪರದಡಿಯ ಸಿಹಿ ವಾಸನೆಯೇ ಆಪ್ಯಾಯಮಾನಮಾನವಾಗಿತ್ತೋ, ನಾನು ಕೇಳುವ ಸಾಹಸ ಮಾಡಲಿಲ್ಲ. ಆದರೆ ಹೊಸದಾಗಿ ಹೋದ ಗಂಡನ ಮನೆಯಲ್ಲಿ ನಾಲ್ಕು ಜನ ಕೂತು 'ಬೀಗರ ಮನೆಲ್ಲಿ ಭರ್ಜರಿ ವೆನಿಲ್ಲಾ ಪ್ಲಾಟ್ ಮಾಡಿದ್ದ' ಎನ್ನುವುದನ್ನು ಕೇಳಿದಾಗೆಲ್ಲಾ ನನಗೆ ಮದುವೆ ಮನೆಯಲ್ಲಿನ ವೈರುಧ್ಯ ನೆನಪಾಗಿ ನಗು ಬರುತ್ತಿದ್ದುದು ಸುಳ್ಳಲ್ಲ.
ಇಂತಿಪ್ಪ ವೆನಿಲ್ಲಾ ಮುಗಿಲೇರಿ ಕುಂತಿದ್ದು, ಮೆರೆದಿದ್ದು ಒಂದು ನಾಲ್ಕು ವರ್ಷ ಮಾತ್ರ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ವೆನಿಲ್ಲಾಕ್ಕೆ ಬೆಲೆ ಏರಿದಷ್ಟೇ ಸುಲಭವಾಗಿ ಕುಸಿದೂ ಹೋಯಿತು. ಲಾಭದ ಆಸೆಗೆ ಬಿದ್ದ ಒಂದಷ್ಟು ಜನ ಸರಿಯಾಗಿ ಸೋಡಿಗೆಯ ವರ್ಗ ವಿಂಗಡನೆ ಮಾಡದೆ ಮಾರುಕಟ್ಟೆಗೆ ಬಿಟ್ಟಿದ್ದು, ಕಲಬೆರಕೆ ಮಾಡಿದ್ದು... ಒಳ್ಳೆಯ ರೈತರ ಸಂಪಾದನೆಗೂ ಮಣ್ಣು ಹಾಕಿತು. ಮುಚ್ಚಟೆಯಿಂದ ಬೆಳೆದು, ಸಂಸ್ಕರಿಸಿ ಇಟ್ಟಿದ್ದ ಕಟ್ಟು ಕಟ್ಟು ವೆನಿಲ್ಲಾ ಕೊಳ್ಳುವವರಿಲ್ಲದೇ ಮುಗ್ಗತೊಡಗಿದಾಗ ಬೆಳೆಗಾರರು ಕಂಗೆಟ್ಟರು. ಹೊಸತಾಗಿ ಚಾಲ್ತಿಗೆ ಬಂದಿದ್ದ ಬೆಳೆಯಾಗಿದ್ದರಿಂದ ಅದರ ಪರ್ಯಾಯ ಬಳಕೆಯಾಗಲಿ, ಮಾರುಕಟ್ಟೆ ತಂತ್ರವಾಗಲೇ ಬಹುತೇಕರಿಗೆ ತಿಳಿದಿರಲಿಲ್ಲ. ವೆನಿಲ್ಲಾ ಅಬ್ಬರದಲ್ಲಿ ತೋಟದಲ್ಲಿ ತಲೆಮಾರಿನಿಂದ ಬೆಳೆದುಕೊಂಡು ಬಂದಿದ್ದ ಏಲಕ್ಕಿ, ಕಾಳುಮೆಣಸಿಂಥ ಉಪಬೆಳೆಗಳನ್ನು ಮರೆತಿದ್ದ ಜನ ನಿಧಾನವಾಗಿಯಾದರೂ ಎಚ್ಚೆತ್ತು ಮತ್ತೆ ಅವುಗಳ ಬುಡಕ್ಕೆ ಮಣ್ಣು, ಗೊಬ್ಬರ ಹೊರಲಾರಂಭಿಸಿದರು. ಏಲಕ್ಕಿ ಪಾಯಸಕ್ಕೆ ಮರಳಿದ್ದಷ್ಟೇ ಅಲ್ಲ, ಹೊಸದಾಗಿ ಡ್ರೈಯರಿನಲ್ಲೂ ಜಾಗ ಪಡೆದುಕೊಂಡಿತು.

ಮೊನ್ನೆ ಜೂನಿನಲ್ಲಿ, ತುಂಬಾ ಸಮಯದ ನಂತರ ಊರಿಗೆ ಹೋದಾಗ ಅಲ್ಲಿ ಇಲ್ಲಿ ತೋಟ ಸುತ್ತಾಡುತ್ತಿದ್ದೆ. ಅಡಿಕೆ ಮರಗಳಿಗೆ ಸುತ್ತಿದ್ದ ಕಾಳು ಮೆಣಸಿನ ಬಳ್ಳಿಗಳ ಮಧ್ಯೆ ಸ್ಯಾಂಪಲ್ಲಿಗೆ ಕೂಡ ಒಂದು ವೆನಿಲ್ಲಾ ಬಳ್ಳಿ ಕಾಣದು. ಕೆಲವೆಡೆ ಹಿಂದೆ ಚಪ್ಪರ ಇದ್ದ ಜಾಗದಲ್ಲಿ ಬೋಳು ಬೋಳು ಕಲ್ಲು ಕಂಬಗಳ, ಗೂಟಗಳ ಸಾಲು ಇಂದೋ ನಾಳೆಯೋ ಬುಡಮೇಲಾಗುವುದಕ್ಕೆ ಕಾಯುತ್ತ ನಿಂತಿದ್ದರೆ, ಇನ್ನು ಹಲವೆಡೆ ಆಗಲೇ ಎರಡಡಿ ಎತ್ತರದ ಅಡಿಕೆ ಸಸಿಯ ಸಾಲುಗಳು ಎದ್ದಿವೆ. ಕೆಲವೊಂದು ಕಡೆ ಮಾತ್ರ ವೆನಿಲ್ಲಾ ಬುಡ ಕಿತ್ತ ನಂತರದ ಕುಣಿ ಹಾಗೆಯೇ ಬಾಯ್ತೆರೆದು ನಿಂತಿದೆ, 'ವೆನಿಲ್ಲಾ ದುಡ್ಡು' ತುಂಬು ಸಂಸಾರಗಳಲ್ಲಿ ತೋಡಿದ ಕಂದರದಂತೆಯೇ!

('ಅವಧಿ.ಕಾಮ್'ನಲ್ಲಿ ಡಿಸೆಂಬರ್ ೪, ೨೦೧೩ರಂದು ಪ್ರಕಟವಾದ ಲೇಖನ)

ಶುಕ್ರವಾರ, ಸೆಪ್ಟೆಂಬರ್ 6, 2013

ಮೌನದ ಮನವಿ

ಎಲ್ಲಿ ಅಡಗಿರುವೆ ಸ್ವರ
ಮೆಲ್ಲಗೆ ಮರೆಯಾಗಿ
ಕಲ್ಲಾಗಿದೆ ಕೊರಳು
ಸೊಲ್ಲೆತ್ತಲೂ ಬರದೆ

ಮನ್ನಿಸು ಅಸಡ್ಡೆಯನು
ಬಿನ್ನಹದ ಉಪೇಕ್ಷೆಯನು
ನಿನ್ನಿರುವ ಮರೆತು
ಬೆನ್ನು ತೋರಿದ ತಪ್ಪನು

ಮತ್ತಿನ ಮಬ್ಬಿನಲಿದ್ದೆ
ಕತ್ತಲೆಯ ಹೊದ್ದಿದ್ದೆ
ಚಿತ್ತದ ನುಡಿ ಲೆಕ್ಕಿಸದೆ
ಮೆತ್ತಗೆ ಮುಸುಕೆಳೆದಿದ್ದೆ

ಭ್ರಮೆ ಚದುರಿ ಬಯಲಾಗೆ
ಕಮರಿತ್ತು ದನಿ ಟಿಸಿಲು
ಅಮಾವಾಸ್ಯೆಯ ನಭದಂತೆ
ಜಮೆಯಾದ ಕಾರ್ಮುಗಿಲು

ಇಲ್ಲೀಗ ಗದ್ದಲ, ಎಲ್ಲೆಲ್ಲೂ ಸಪ್ಪಳ
ಚೆಲ್ಲಿ ತುಳುಕಿದೆ ಕರ್ಕಶ ರವ
ಒಲ್ಲೆ ಈ ಗೌಜು, ನಿಲ್ಲದ ಮೋಜು
ಮೆಲ್ಲುಲಿಗೆ ಕಿವಿಯಾಗಿ ಕಾದಿದೆ ಜೀವ

ಬಿಕ್ಕುತಿಹೆ ಬೇಡುತಿಹೆ ಪ್ರೀತಿಯಲಿ ಬೈಯುತಿಹೆ
ಸಿಕ್ಕು ನೀ ಬೇಗ, ಕಣ್ಣಂತೆ ಕಾಯುವೆ
ಸುಕ್ಕಿದ ಚೇತನಕೆ ತುಸು ಕಸುವು ತುಂಬುವೆ
ಅಕ್ಕರೆಯಲಿ ಆದರಿಸಿ ಬೆನ್ನಾಗಿ ನಿಲ್ಲುವೆ
(ಅವಧಿ.ಕಾಮ್ ನಲ್ಲಿ ಪ್ರಕಟವಾದ ಕವನ)
ನಮ್ಮ ನಿಮ್ಮ ನಡುವಿನ ಮಹಾನ್ 'ಕಥೆ'ಗಾರರು!

ಇಲ್ಲ, ನಾನು ಮಾಸ್ತಿ, ಕೆ. ಸದಾಶಿವ, ಲಂಕೇಶ, ವೈದೇಹಿ ಇವರ ಬಗ್ಗೆ ಹೇಳುತ್ತಿಲ್ಲ, ಓ. ಹೆನ್ರಿ, ಚೆಕಾವ್‌ರ ಬಗ್ಗೆಯೂ ಅಲ್ಲ. ಅವರೆಲ್ಲಾ ಭಾರಿ ಎತ್ತರಕ್ಕೆ, ಅಗಲಕ್ಕೆ ಬೆಳೆದವರು. ನಾನು ಕೈ ಚಾಚಿದ್ದು ಹೋಗಲಿ, ಉದ್ದದ ದೋಟಿ ಹಿಡಿದು ಕುಪ್ಪಳಿಸಿದರೂ ಅವರ ಕಥನ ಕುಸುಮ ಕೈಗೆ ಸಿಗುವುದಿಲ್ಲ. ಏನಿದ್ದರೂ ಪರಿಮಳ ಮಾತ್ರ ಆವರಿಸಿಕೊಳ್ಳುತ್ತದೆ. 

ನನಗೆ ಸಿಗುವುದೇನಿದ್ದರೂ ಇಲ್ಲೇ ಅಕ್ಕ-ಪಕ್ಕ ಇರುವ, ನಮ್ಮಲ್ಲಿನ 'ನ, ಮ, ಮವತ್ತು' ಎಲ್ಲ ಆಗಿರುವ ಸಾಮಾನ್ಯ ಜನರು. ನಮ್ಮೊಳಗಿನ ಅಸಾಧಾರಣ ಕಥೆಗಾರರು! ಅಷ್ಟೋ, ಇಷ್ಟೋ ಶಿಕ್ಷಣ, ಒಂದು ಕೆಲಸ, ಒಂದಷ್ಟು ಜವಾಬ್ದಾರಿ, ಸಂ-ಸಾರ, ಬಂಧು-ಬಳಗ... ಇವರ ಬಯೋಡೇಟಾ. ಬಾಯ್ತುಂಬ ನಗು, ಚೂರು ಹಾಸ್ಯಪ್ರಜ್ಞೆ, ಅದನ್ನು ಮಾತಿಗೆ ಬಗ್ಗಿಸುವ ಕಲೆಗಾರಿಕೆ.... ಅವರ ಆಸ್ತಿ. ಇವರ ಕಥೆ ಅಕ್ಷರಗಳಲ್ಲಿ ಅರಳುವುದಿಲ್ಲ. ಕಿವಿಯಲ್ಲಿ ತೂರಿಕೊಂಡು ಸೀದಾ ಮೆದುಳಿಗೆ ಹೋಗಿ, ಅಲ್ಲಿನ ಬಿಗಿದುಕೊಂಡ ನರತಂತುಗಳನ್ನೆಲ್ಲಾ ಸಡಲಿಸಿ, ಬೆಚ್ಚನೆಯ ಮಸಾಜ್ ಮಾಡಿ, ಅಲ್ಲಿಂದಲೇ ಒಂದು ಸಿಗ್ನಲ್ ಕೊಟ್ಟು, ಬಾಯಗಲಿಸಿ, ಕೆನ್ನೆ ಅರಳಿಸಿ, ಹಲ್ಲು ಕಿರಿಸಿ, ಕಣ್ಣು ಕಿರಿದಾಗಿಸಿ.... ನಗಲು ಏನೇನು ಬೇಕೋ ಎಲ್ಲ ಮಾಡುತ್ತದೆ. ಮನವನ್ನು ಹಗುರ ಹತ್ತಿಯನ್ನಾಗಿಸುತ್ತದೆ. 
ಹಳ್ಳಿಗಳಲ್ಲಿ ಮದುವೆ, ಮುಂಜಿ, ಶ್ರಾದ್ಧ, ಸಮಾರಾಧನೆಗಳಲ್ಲಿ ಹತ್ತು ಜನ ಸೇರಿದಾಗ ಇಂಥ ಒಬ್ಬವರಿದ್ದರೆ ಪುಕ್ಕಟೆ ಸಮಯಾಲಾಪ. ಅಲ್ಲಿ ಮದುವೆಯೋ, ಉಪನಯನವೋ ಒಂದು ಕಾರ್ಯ ನಿಶ್ಚಯವಾಯಿತೆಂದರೆ ಅದನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಮನೆಯವರದು, ಬಂಧುಗಳದು, ಊರವರದು. ಬುಕ್ ಮಾಡಿದರೆ ಆಯಾ ಹೊತ್ತಿಗೆ ಬಂದು ಪಟಪಟ ಕೆಲಸ ಮುಗಿಸಿ, ನಿರ್ವಿಕಾರದಿಂದ ದುಡ್ಡು ಎಣಿಸಿಕೊಂಡು ಹೋಗುವ ಜನ ಅವರಲ್ಲ. ಎರಡು ದಿನ ಇರುವಾಗಲಿಂದಲೇ ಬರುತ್ತ, ಹೋಗುತ್ತ 'ಏನಾದರೂ ಕೆಲ್ಸ ಇದ್ರೆ ಮುದ್ದಾಂ ಹೇಳಿ' ಎಂದು ವಿಚಾರಿಸುವ, ಊಟಕ್ಕೆ ಬೇಕಾಗುವ ಬಾಳೆಎಲೆ ಸಂಸ್ಕರಿಸಿ, ಅಂಗಳ ಅಲಂಕರಿಸಿ, ಮಂಟಪ, ಮೇಲ್ಗಟ್ಟು ಕಟ್ಟಿಕೊಡುವ, ಅಡುಗೆಗೆ ತರಕಾರಿ ಹೆಚ್ಚಿಕೊಟ್ಟು, ಕಾಯಿ ತುರಿದು, ಲಾಡು ಕಟ್ಟಿ, ಹೋಳಿಗೆ ಬೇಯಿಸಿ.... ಎಲ್ಲ ಕೆಲಸಕ್ಕೂ ಸೈ ಎನ್ನುವ ಜನ. ಇಂಥ ಹತ್ತಾರು ಕೆಲಸ, ಅದೂ ಪರಿಚಯದ ಜನರ ನಡುವೆ ಒಣ ಮೌನದಲ್ಲಿ ನಡೆಯುತ್ತದೆಯೇ? ಭರಪೂರ ಮಾತು, ತಮಾಷೆ, ತರಲೆ, ಮಧ್ಯದಲ್ಲಿ ಅವಲಕ್ಕಿ-ಚಾ ಫಳಾರ..... ಮೇಲಿಂದ ಹಂಚು ಹಾರಿಸುವಷ್ಟು ನಗೆ. 
ಇವರ ಕಥೆಗೊಂದು ದೊಡ್ಡ ಸುದ್ದಿ ಬೇಕಿಲ್ಲ. ಯಾರೋ ಒಬ್ಬ ಜಾರಿ ಬಿದ್ದ ಜಾಣ, ಎಡವಟ್ಟು-ಎಚ್ಚರಗೇಡಿ, ಯಾವುದೋ ಕಾರ್ಯಕ್ರಮದ ವ್ಯವಸ್ಥೆ-ಅವ್ಯವಸ್ಥೆ, ಪ್ರವಾಸ-ಪ್ರಯಾಸ... ಕೊನೆಗೆ ಆಸ್ಪತ್ರೆಯಾತ್ರೆ, ತಪ್ಪಿಸಿಕೊಂಡ ಆಕಳು, ಸೇತುವೆ ಮೇಲೆ ಹರಿದ ನೀರು.... ಎಲ್ಲವೂ ಕುತೂಹಲ ಹುಟ್ಟಿಸುವ ವಿಷಯವೇ. ಅಪಘಾತ, ಪ್ರೇಮ ಪ್ರಸಂಗಗಳಂತೂ ಭಾರಿ ಆಕರ್ಷಣೆಯ ವಿಷಯಗಳು. ಕೆಲಸ ಮಾಡುತ್ತಿರುವಾಗ, ಊಟ-ಆಸ್ರಿಗೆ ಮುಗಿಸಿ ಕವಳ (ಎಲಡಿಕೆ) ಹಾಕಿಕೊಂಡು ಕುಂತಾಗ, ಇಸ್ಪೀಟ್ ಮಂಡಲಗಳ ಮಧ್ಯದಲ್ಲಿ ಒಬ್ಬ ಮಾತುಗಾರ 'ಆಮೇಲೆ, ಆ .... ಸುದ್ದಿ ಗೊತ್ತಾ' ಎಂದು ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಸುತ್ತ ಕುಂತ ಹತ್ತು ಜನ ಇತ್ತ ತಿರುಗಿ, 'ಹಾಂ, ಹೌದು ಮಾರಾಯ, ಆ ಸುದ್ದಿ ಹೇಳೋ' ಎಂದು ಆ ವಿಷಯ ಮಂಡನೆಯನ್ನು ಅನುಮೋದಿಸುತ್ತಾರೆ. ಕಥೆಯ ಮೋಡಕ್ಕೆ ಕೇಳುಗರು ಗಾಳಿ ಊದುತ್ತಿದ್ದಂತೆಯೇ ಭರಭರ ಮಾತಿನ ಮುಸಲಧಾರೆ! 
ಕಡಿಮೆ ಮಾತಿನ ಜನವಾಗಿದ್ದರೆ 'ಬಸ್ ಸ್ಕಿಡ್ ಆಗಿ ರಸ್ತೆಯಂಚಿನ ಕಾಲುವೆಗೆ ಹೋಗಿ ನಿಂತಿತಂತೆ, ನಾಲ್ಕೈದು ಜನಕ್ಕೆ ಗಾಯವಾಯ್ತಂತೆ' ಎಂದೋ, 'ಭಟ್ರ ಮಗಳು ಕ್ರಿಶ್ಚಿಯನ್ ಹುಡುಗನ ಜೊತೆ ಓಡಿ ಹೋಗಿ ಮದುವೆ ಆದ್ಲಂತೆ' ಎಂದೋ ಒಂದೆರಡು ವಾಕ್ಯಗಳಲ್ಲಿ ಹೇಳಿ ಮುಗಿಸುವ ವಿಷಯವನ್ನು ಇವರು ಬರೋಬ್ಬರಿ ಎರಡು ತಾಸು ಹೇಳಬಲ್ಲರು. ಅಪಘಾತವಾದ ಬಸ್ ಹಿಂದಿನ ಟ್ರಿಪ್‌ಗೆ ಎಲ್ಲಿಗೆ ಹೋಗಿತ್ತು ಎಂಬಲ್ಲಿಂದ ಶುರುವಾದರೆ- ಎಷ್ಟು ಹೊತ್ತಿಗೆ ಪೇಟೆಯಿಂದ ಹೊರಟಿತು, ಅದಕ್ಕೂ ಮೊದಲು ಚಾಲಕ ಏನೇನು ಮಾಡಿದ, ಬಸ್‌ನಲ್ಲಿ ಯಾರ್ಯಾರು ಎದ್ದರು, ಅವರು ಏನೆಲ್ಲಾ ಕಾರಣಕ್ಕೆ ಪೇಟೆಗೆ ಹೋಗಿದ್ದರು, ರಶ್ ಇತ್ತೇ, ಇದ್ದರೆ ಏಕೆ, ಇರಲಿಲ್ಲವೇ- ಅದು ಏಕೆ, ಅವತ್ತು ಸೆಖೆ ಇತ್ತೇ, ಮೋಡಗಟ್ಟಿತ್ತೇ..... ಕಥಾನದಿಗೆ ಸೇರಿಕೊಳ್ಳುವ ಹಳ್ಳ-ಕೊಳ್ಳಗಳು ಅಪಾರ. ಒಂದೊಂದು ಹಳ್ಳ ಸೇರಿಕೊಂಡಾಗಲೂ ಹರಿವು ಹಿರಿದಾಗುತ್ತ ಭೋರ್ಗರೆಯತೊಡಗುತ್ತದೆ. ಕಥೆ ಶುರುವಾಗಿ ಮುಕ್ಕಾಲು ಗಂಟೆಯಾದರೂ ಬಸ್ ಇನ್ನೂ ಅಪಘಾತ ಆಗಲಿರುವ ಜಾಗಕ್ಕೆ ಬಂದಿರುವುದಿಲ್ಲ. ಎರಡೆರಡು ನಿಮಿಷಕ್ಕೊಮ್ಮೆ 'ಆಮೇಲೇನು ಆಯ್ತು ಗೊತ್ತಾ', 'ನಿಮ್ಗೆ ಹೇಳ್ಬೇಕು ಅಂದ್ರೆ', 'ನಿಮಗೆ ಗೊತ್ತಿದೆಯೋ ಇಲ್ವೋ'....ಗಳಂಥ ಸ್ಪೀಡ್ ಬ್ರೇಕರ್‌ಗಳನ್ನು ಬಳಸುವುದರಿಂದ ಕಥೆ ನಾಗಾಲೋಟ ಸಾಗುವುದು ಕಷ್ಟವೇ. 
ಹಾಗೆಯೇ ಪಕ್ಕದೂರಿನ ಹುಡುಗಿಯ/ಹುಡುಗನ ಪ್ರೇಮ ಪ್ರಸಂಗವನ್ನು ಕೇಳುತ್ತ ಕುಳಿತವರಿಗೆ ಕಥೆಯ ಜೊತೆ ಬೋನಸ್ ಆಗಿ ಆಕೆಯ/ಆತನ ಜೋಡಿ ಯಾರು, ಅವನ/ಳ ಹಿನ್ನೆಲೆ ಏನು, ಅವರ ಸ್ನೇಹಿತೆ/ತರ್‍ಯಾರು, ಅವರ್‍ಯಾರಾದರೂ ಹೀಗೆಯೇ ಪ್ರೇಮಪಾಶದಲ್ಲಿ ಸಿಕ್ಕಿಕೊಂಡಿದ್ದಾರೆಯೇ, ಇದ್ದರೆ ಯಾರ ಜೊತೆ, ಅವರ ಮನೆಯಲ್ಲಿ, ಮನೆತನದಲ್ಲಿ ಬೇರೆ ಯಾರಿಗಾದರೂ ಹೀಗೆ ಹೂಬಾಣ ಹೊಡೆದಿತ್ತೇ, ಅವರು ಆಮೇಲೆ ಯಾರನ್ನು ಮದುವೆಯಾದರು... ಇಂಥ ಹತ್ತಾರು ಪ್ರಸಂಗಗಳ ಸ್ಥೂಲ ಪರಿಚಯ ದೊರೆಯುತ್ತದೆ. 
ಬೇರೆಯವರ ಕೈಗೊಂದು ಹತ್ತಿಯ ಉಂಡೆ ಕೊಟ್ಟರೆ ಹೆಚ್ಚೆಂದರೆ ಹೂಬತ್ತಿ ಹೊಸೆಯಬಹುದು. ಇವರೋ ಅದನ್ನು ಹಿಂಜಿ ಹಿಂಜಿ ನೂಲು ಹೊಸೆದು ಅಂಗಿ ಮಾಡಿ ಹಾಕಿಕೊಳ್ಳುವಷ್ಟು ಹಿಂಜುಬುರುಕರು. ಹೆಚ್ಚು ಕಡಿಮೆ ಎಲ್ಲ ಕಥೆಗಳ 'ಎಲ್ಲಾಯ್ತು, ಏನಾಯ್ತು' ಎಂಬುದು ಕೇಳುಗರಿಗೆ ಅರಿವಿರುತ್ತದೆ. ಆದರೆ ಹಸಿ ತರಕಾರಿ ತಿನ್ನುವುದಕ್ಕಿಂತ, ಉಪ್ಪು ಖಾರ ಹಚ್ಚಿ, ಮಸಾಲೆ ಒಗ್ಗರಣೆ ಮಾಡಿ ತಿಂದರೆ ರುಚಿ ಹೆಚ್ಚು ನೋಡಿ- ಹಾಗಾಗಿ ಅವರೂ ಮಜ ತೆಗೆದುಕೊಳ್ಳುತ್ತ ಕುಳಿತುಕೊಳ್ಳುತ್ತಾರೆ. 
ಕಥೆಯಲ್ಲಿ ಕಾಮಿಡಿಯೇ ಇರಬೇಕೆಂದಿಲ್ಲ. ರೋಗ-ರುಜಿನ, ಸಾವಿನ ಪ್ರಸಂಗಗಳನ್ನೂ ಇವರು ಅರೆನಿಮಿಷ ಬಿಟ್ಟುಹೋಗದಂತೆ ಪುನರ್ರಚನೆ ಮಾಡಿ ಕೇಳುಗರನ್ನು ಆಸ್ಪತ್ರೆಗೋ, ಸಾವಿನ ಮನೆಗೋ ಕರೆದೊಯ್ದು ಬಿಡುತ್ತಾರೆ. ಮೃತರ ಸಂಬಂಧಿಕರ ಗೋಳಿನ ಸುದ್ದಿಗೆ ಕೇಳುಗರ ಕಣ್ಣಂಚೂ ಒದ್ದೆಯಾದರೆ, ಹೃದಯ ವಜ್ಜೆಯಾಗುತ್ತದೆ. 
ನಮ್ಮ ಸಂಬಂಧಿಕರ ಕುಟುಂಬವೊಂದಿದೆ. ಕಥೆ ಹೇಳುವುದು ಅವರ ಜೀವತಂತುವಿನಲ್ಲೇ ಇರಬೇಕು. ಅವರ ಮನೆಯಲ್ಲಿ ಎಲ್ಲರೂ ಕಥೆಗಾರರೇ. ರಾತ್ರಿ ಊಟದ ನಂತರ ಎಲ್ಲ ಸೇರಿ ಕಥೆ ಗಂಟು ಬಿಚ್ಚಿದರೆಂದರೆ ಅದೊಂದು ದೊಡ್ಡ ಮನರಂಜನಾ ಕಾರ್ಯಕ್ರಮ. ನನ್ನ ಮದುವೆಯ ನಂತರ ಪತಿಯೊಂದಿಗೆ ಅವರ ಮನೆಗೆ ಹೋಗಿದ್ದೆ. ಊಟವಾಗುತ್ತಿದ್ದಂತೆ ಗಂಡಸರು, ಮಕ್ಕಳೆಲ್ಲ ಸೇರಿ ಹೊಸ ನೆಂಟನೊಂದಿಗೆ ಮಾತಿಗೆ ಕುಳಿತರು. ಮನೆಯ ಹಿರಿಯಣ್ಣನ ಬೀಗರ ಮನೆಯಲ್ಲಿ ಸೂತಕ ಬಂದು ಮದುವೆಯೊಂದು ನಿಂತು ಹೋಗಿತ್ತು. ಅವರು ಶುರು ಮಾಡಿದರು- 'ನಮ್ಮ ಗೀತನ ಮನೆಲ್ಲಿ ಮಾರಾಯ, ಸೂತಕದ್ದೇ ಸಮಸ್ಯೆ. ಎಲ್ಲರ ಮನೆಲ್ಲಿ ಹನ್ನೊಂದು ದಿನಕ್ಕೆ ಸೂತಕ ಮುಗಿದ್ರೆ ಇವಕ್ಕೆ ಮುನ್ನೂರ ಹನ್ನೊಂದು ದಿನವಾದ್ರೂ ಸೂತಕ'. ಎರಡನೇ ಸೋದರ ಮುಂದುವರಿಸಿದರು- 'ದೊಡ್ಡ ಮನೆತನ ನೋಡಿ, ನೂರಾರು ಜನ ಇದ್ದ. ಎಲ್ಲ ಹಿಸ್ಸೆಯಾಗಿ ಹೋದ್ರೂ ಸೂತಕ ಸಂಬಂಧ ಮುರಿದ್ದಿಲ್ಲೆ'. ಈಗ ಕಿರಿಯ ಸೋದರನ ಪಾಳಿ- 'ಯಾವ (ಶುಭ)ಕಾರ್ಯ ನಿಶ್ಚಯ ಮಾಡಿದ್ರೂ ಎರಡ್ಮೂರು ಸಲ ಸೂತಕ ಬಂದು ಮುಂದೆ ಹೋಪದು ಗ್ಯಾರಂಟಿ. ಸತ್ತ ಸೂತಕ ಮುಗಿತು ಹೇಳಿ ಕಾರ್ಯ ಖಾಯಂ ಮಾಡಲು ಹೋದ್ರೆ ಹಡೆದ ಸುದ್ದಿ ಬರ್‍ತು. ಆ ಸೂತಕ ಮುಗಿಯೋ ಹೊತ್ತಿಗೆ ಇನ್ಯಾರೋ ಬಸುರಿಗೆ ದಿನ ತುಂಬಿದ ಸುದ್ದಿ ಬರ್‍ತು. ಭಾರಿ ಕಷ್ಟ ಮಾರಾಯ'.
ದೊಡ್ಡ ಮನೆತನ ಅಂದ ಮೇಲೆ ಸದಸ್ಯರು ಜಾಸ್ತಿ ತಾನೆ, ಮದುವೆ, ಮುಂಜಿ, ಶುಭ ಕಾರ್ಯಗಳೂ ಜಾಸ್ತಿ. ಸರಿ, ಯಾವ್ಯಾವ ಕಾರ್ಯಕ್ಕೆ ಎಷ್ಟೆಷ್ಟು ಸಲ ಅಡ್ಡಿ ಬಂತು, ಹೇಗ್ಹೇಗೆ ಅಂತೂ ಪೂರೈಸಿದರು ಎಂಬುದನ್ನು ಮನೆಯ ಹಿರಿ ತಲೆಯಿಂದ ಕಿರಿಯ ಮೊಮ್ಮಕ್ಕಳವರೆಗೆ 'ಖೋ' ಪಡೆದವರಂತೆ, ರಿಲೇ ಬೇಟನ್ ಪಡೆದವರಂತೆ ಒಬ್ಬೊಬ್ಬರಾಗಿ ಹೇಳಿದರು. ಮನೆಗೆಲಸ ಮುಗಿಸಿ ಬಂದ ಹೆಂಗಸರೂ ಮಧ್ಯದಲ್ಲಿ ಸೇರಿಕೊಂಡು 'ಖೋ' ಅಂದವರೇ. 'ಸೂತಕ ಕಳೆಯುವ' ಹೊತ್ತಿಗೆ ಬರೋಬ್ಬರಿ ಮೂರು ತಾಸು ಕಳೆದಿತ್ತು. ಅಷ್ಟು ಹೊತ್ತು ಒಂದೇ ವಿಷಯವನ್ನು ಹೇಳಿದ್ದರೂ ನಮಗೆಲ್ಲೂ ಒಂದಿನಿತೂ ಬೇಸರ ಬಂದಿರಲಿಲ್ಲ, ಬದಲಾಗಿ ನಗೆಯ ಹೊಳೆಯೇ ಹರಿದಿತ್ತು ಅಲ್ಲಿ. ಕಥೆ ಹೇಳುವವರು ಬೇರೆ ಬೇರೆಯವರಾದರೂ ಹಾಸ್ಯದ ತೂಕವನ್ನು, ನಮ್ಮ ಆಸಕ್ತಿಯ ಮಟ್ಟವನ್ನು ಕಾಯ್ದುಕೊಂಡು ನಗು ಚಿಮ್ಮಿಸಿದ ರೀತಿ ಮೆಚ್ಚಲರ್ಹವಾಗಿತ್ತು. 
ಮನುಷ್ಯರ ಜೊತೆಗೆ ಇರುವೆ-ಗೊದ್ದಗಳನ್ನೂ ಆಕರ್ಷಿಸುವ ಬೆಲ್ಲದಂತೆ ಈ ಕಥೆ ಹೇಳುವ ಕಲೆ. ಉಳ್ಳವ-ಇಲ್ಲದವ, ಒಡೆಯ-ಆಳು, ಗಂಡಸು-ಹೆಂಗಸು, ಹಿರಿಯ-ಕಿರಿಯ ಎಲ್ಲ ಭೇದಗಳನ್ನೂ ಅಳಿಸಿ ಕೇವಲ ಹೇಳುವವ-ಕೇಳುವವ(ರು) ಎಂಬುದೊಂದು ತಾತ್ಕಾಲಿಕವಾದರೂ ಪ್ರಾಮಾಣಿಕವಾದ ಸಂಬಂಧವನ್ನು ಹುಟ್ಟುಹಾಕುತ್ತದೆ. ಸುದ್ದಿಯೆಂಬ ರಬ್ಬರ್ ಚೂರಿಗೆ ಗಾಳಿ ಊದಿ ಊದಿ ಪುಗ್ಗಿ ಹಾರಿ ಬಿಡುವ ಇದು, ಇಂಥದ್ದೇ ಚೌಕಟ್ಟಿನಲ್ಲಿ ಜನರನ್ನು ರಂಜಿಸುವ ಟಿವಿ 'ಟಾಕ್ ಶೋ'ಗಳ ಹಂಬಲ್ ಕೌಂಟರ್‌ಪಾರ್ಟ್. ಟಾಕ್ ಶೋ ನಡೆಸುವವರು ಕಾರ್ಯಕ್ರಮ ಮುಗಿದ ಮೇಲೆ ಝಣಝಣ ದುಡ್ಡೆಣಿಸುತ್ತಾರೆ. ನಮ್ಮ ಕಥೆಗಾರರೋ... ಒಂದು ಚಾ ಕುಡಿದೋ, ಎಲಡಿಕೆ ಹಾಕಿಕೊಂಡೋ ಮನೆಗೆ ಮರಳುತ್ತಾರೆ. ಕಥೆ ಇನ್ನೊಂದು ದಿನ ಇನ್ನೆಲ್ಲೋ ಮರು ಹುಟ್ಟು ಪಡೆಯುತ್ತದೆ. 

(ದ್ಯಾಟ್ಸ್ ಕನ್ನಡ.ಕಾಮ್ ನಲ್ಲಿ ಪ್ರಕಟವಾದ ಲೇಖನ)